ಜಿಲ್ಲೆ

ಸ್ತ್ರೀ ಸಮಾನತೆಗಾಗಿ ಎಲ್ಲರೂ ಕೈಜೋಡಿಸಲಿ

ಅವಿನಾಶ್ ಜೈನಹಳ್ಳಿ

ಮೈಸೂರು: ಮಹಿಳೆಯರ ಸಮಾನತೆಗಾಗಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ಜೆ.ಪಿ.ನಗರದ ರಮಾಬಾಯಿ ಅಂಬೇಡ್ಕರ್ ಮಹಿಳಾ ಸಮಾಜ ವತಿಯಿಂದ ಪುಟ್ಟರಾಜ ಗವಾಯಿಗಳ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಸಂಘದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವತಂತ್ರ್ಯಾ ನಂತರವೂ ಮಹಿಳೆಗೆ ಸೂಕ್ತ ಸ್ಥಾನ ಮಾನ ದೊರೆತಿಲ್ಲ. ಹಲವು ಸವಾಲುಗಳ ನಡುವೆಯೂ ಕಳೆದ ಐದು ವರ್ಷಗಳಿಂದ ರಮಾಬಾಯಿ ಅಂಬೇಡ್ಕರ್ ಮಹಿಳಾ ಸಮಾಜ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ನಾನಾ ಸೇವೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾದರಿಯಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಜವರಪ್ಪ ಮಾತನಾಡಿ, ನಾವು ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಅವರ ಸಾಧನೆಯನ್ನೇ ಸ್ಮರಿಸುತ್ತೇವೆ. ಆದರೆ ಅಂಬೇಡ್ಕರ್ ಅವರ ಈ ಎಲ್ಲ ಸಾಧನೆಗೆ ಒತ್ತಾಸೆಯಾಗಿ ನಿಂತ ಅವರ ಪತ್ನಿ ರಮಾಬಾಯಿ ಎಂಬುದನ್ನು ಮರೆಯುತ್ತಿದ್ದೇವೆ. ರಮಾಬಾಯಿ ಅಂಬೇಡ್ಕರ್ ಮಹಿಳಾ ಸಮಾಜವು ಅದಕ್ಕೆ ಹೊರತಾಗಿ ರಮಾಬಾಯಿ ಅವರ ಹೆಸರಿನಲ್ಲಿಯೇ ಮಹಿಳೆಯನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಒಂದು ಮಹಿಳಾ ಸಂಘಟನೆಯಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಶ್ಲಾಸಿದರು.
ಬಡ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾಜದ ಅಧ್ಯಕ್ಷೆ ಲೀಲಾವತಿ ಯಲಕ್ಕಯ್ಯ, ಕಾರ್ಯದರ್ಶಿ ಶಮಾ, ಆರ್ಥಿಕ ಇಲಾಖೆಯ ಪುಟ್ಟಮ್ಮಣ್ಣಿ ಇದ್ದರು.