ಜಿಲ್ಲೆ

ಅಪೌಷ್ಟಿಕ ನಿರ್ಮೂಲನೆಗೆ ಎಲ್ಲರೂ ಸಹಕರಿಸಿ

ನಾಗಮಂಗಲ: ಮಕ್ಕಳನ್ನು ಸಧೃಡಗೊಳಿಸುವ ಸದುದ್ದೇಶದಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬೆಳಗಿನ ಹಾಲು, ಬಿಸಿಯೂಟ ಮತ್ತು ಮೊಟ್ಟೆ ವಿತರಣೆ ಮಾಡಲಾಗುತ್ತಿದ್ದು, ಅಪೌಷ್ಟಿಕ ನಿರ್ಮೂಲನೆಗಾಗಿ ಪ್ರತಿಯೊಬ್ಬರೂ ಸಹಕರಿಬೇಕಿದೆ ಎಂದು ಚೀಣ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಉಮಾಶಂಕರ್ ತಿಳಿಸಿದರು.

ತಾಲೂಕಿನ ಹೊಣಕೆರೆ ಹೋಬಳಿಯ ಚೀಣ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಇದು ಕೇವಲ ಸರ್ಕಾರಿ ಕಾರ್ಯಕ್ರಮ ಆಗಿರದೆ ಸಮುದಾಯದ ಕಾರ್ಯಕ್ರಮ ಆಗಬೇಕು ಎಂದರು.

ಶಿಕ್ಷಕಿ ಪಿ.ತೇಜಸ್ವಿನಿ ಮಾತನಾಡಿ, ಪೋಷಣಾ ಅಭಿಯಾನ ಯಾವಾಗ ಪ್ರಾರಂಭವಾಯಿತು ಹಾಗೂ ಅದರ ಉದ್ದೇಶಗಳನ್ನು ಸವಿವರವಾಗಿ ತಿಳಿಸಿದರು. ಹುಟ್ಟಿದ ಮೊದಲ ದಿನದಿಂದ ಆರು ವರ್ಷಗಳವರೆಗೆ ಮಗುವಿಗೆ ಸಿಗಬೇಕಾದ ಪೋಷಕಾಂಶಗಳ ಬಗ್ಗೆ ವಿವರಿಸಿದರು. ಗರ್ಭಿಣಿಯರು, ಹಾಲುಣಿಸುವ ತಾಯಂದಿರಲ್ಲಿ ಕಂಡುಬರುವ ರಕ್ತಹೀನತೆಯ ಬಗ್ಗೆ ಕಾರಣಗಳನ್ನು ತಿಳಿಸಿದರು. ಈ ನಿಟ್ಟಿನಲ್ಲಿ ಪಂಚಾಯಿತಿ ಹಾಗೂ ಅಂಗನವಾಡಿಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಬಸವೇಗೌಡ, ಶಿಕ್ಷಕರಾದ ಗಾಯತ್ರಿ, ಬಸವರಾಜು, ಶ್ರುತಿ, ಶ್ರೀಧರ್, ಪ್ರಕಾಶ್, ರಯಾನಾ, ರುದ್ರೇಶ್ ಇತರರು ಇದ್ದರು.