ಜಿಲ್ಲೆ

ಸೌಲಭ್ಯ ಬಳಸಿಕೊಂಡು ಇನ್ನಷ್ಟು ಸಾಧನೆ ಮಾಡಲಿ

ವೀರೇಶ ಸೌದ್ರಿ

ಶಿರಸಿ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮ ನಗರದ ಶಾಸಕರ ಕಾರ್ಯಾಲಯದಲ್ಲಿ ಬುಧವಾರ ನಡೆಯಿತು.

ಶಾಲಾ ಶಿಕ್ಷಣ ಇಲಾಖೆಯಿಂದ ತಾಲೂಕು ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೀಡಲಾಯಿತು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿಕ್ಷಣ ಇಲಾಖೆ ನೀಡಿರುವ ತಂತ್ರಜ್ಞಾನ ಸೌಲಭ್ಯವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದರು.

ಡಿಡಿಪಿಐ ಬಸವರಾಜ ಮಾತನಾಡಿ, ಶೈಕ್ಷಣಿಕ ಹಾಗೂ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಅದರಲ್ಲಿ ಶೈಕ್ಷಣಿಕ ಜಿಲ್ಲಾಮಟ್ಟದಲ್ಲಿ 7 ವಿದ್ಯಾರ್ಥಿಗಳಿಗೆ ಹಾಗೂ ತಾಲೂಕು ಮಟ್ಟದಲ್ಲಿ ತಲಾ 3ರಂತೆ ಒಟ್ಟು ಆರು ತಾಲೂಕಿನ 18ವಿದ್ಯಾರ್ಥಿಗಳು ಒಳಗೊಂಡು ಶೈಕ್ಷಣಿಕ ಜಿಲ್ಲೆಯಲ್ಲಿ 25ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ ಎಂದರು.

ಬಿಇಒ ನಾಗರಾಜ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸದಸ್ಯ ಖಾದರ್ ಆನವಟ್ಟಿ, ಗೀತಾ ಶೆಟ್ಟಿ ಮುಂತಾದವರು ಇದ್ದರು.