ಹಟ್ಟಿಚಿನ್ನದಗಣಿ: ಕೆಲಸದ ವೇಳೆ ಸುರಕ್ಷಾ ಸಲಕರಣೆಗಳನ್ನು ಬಳಸಿದರೆ ಅಪಘಾತಗಳನ್ನು ತಡೆಯಬಹುದು ಎಂದು ಗಣಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಹೇಳಿದರು.
ಹಟ್ಟಿಚಿನ್ನದಗಣಿ ಕಂಪನಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗಣಿ ಸುರಕ್ಷಾ ಸಪ್ತಾಹದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಣಿಗಾರಿಕೆಯ ಕೆಲಸ ಕಷ್ಟವಾಗಿದ್ದು, ಭೂ ಕೆಳಮೈ ಗಣಿಗಾರಿಕೆ ಇನ್ನೂ ಕಷ್ಟವಾಗಿರುತ್ತದೆ. ಕೆಲಸದ ಸಮಯದಲ್ಲಿ ಕಾರ್ಮಿಕರು ತಮ್ಮ ಸುರಕ್ಷತೆ ಕುರಿತು ಜಾಗೃತಿ ವಹಿಸಬೇಕು. ಕಾರ್ಮಿಕರ ಮುಂದಾಳತ್ವದ ನೌಕರರು ಮಾರ್ಗದರ್ಶನ ನೀಡಬೇಕು. ಸುರಕ್ಷತೆ ಬಗ್ಗೆ ತರಬೇತಿ ನೀಡಲು ಗಣಿ ಆಡಳಿತ ವರ್ಗ ಸದಾ ಸಿದ್ಧವಿದೆ ಎಂದು ಹೇಳಿದರು.
ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ.ಶಫಿ ಮಾತನಾಡಿ, ಇದೇ ವರ್ಷ ಗಣಿ ಅಪಘಾತದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ದುಃಖ ತಂದಿದೆ. ಸುರಕ್ಷತೆ ಬಗ್ಗೆ ಆಡಳಿತವರ್ಗ ನಿರಂತರ ಜಾಗೃತಿ ಮೂಡಿಸಲು ತರಬೇತಿ ಕೇಂದ್ರ ಆರಂಭಿಸಬೇಕಾಗಿದೆ. ಸಾರ್ವಜನಿಕ ವಲಯದ ಏಕೈಕ ಲಾಭದಾಯಕ ಉದ್ದಿಮೆಯಾದ ಗಣಿಗಾರಿಕೆಗೆ ಹೆಚ್ಚು ಸುರಕ್ಷತಾ ಸಾಧನಗಳನ್ನು ಒದಗಿಸಿ ಅಪಘಾತಗಳು ಸಂಭವಿಸದಂತೆ ಆಡಳಿತ ವರ್ಗ ನೋಡಿಕೊಳ್ಳಬೇಕು ಎಂದರು.