ಜಿಲ್ಲೆ

ಮಹಿಳೆಯರು ಸಾಧನೆ ಹಾದಿಯಲ್ಲಿ ಸಾಗಲಿ

ಬೇಲೂರು: ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂಬುದಕ್ಕೆ ಕಲ್ಪನಾ ಚಾವ್ಲಾ ಹಾಗೂ ಸುನೀತಾ ವಿಲಿಯಮ್ಸ್ ಸಾಕ್ಷಿಯಾಗಿದ್ದು, ಅವರಂತೆ ಎಲ್ಲ ಮಹಿಳೆಯರು ಸಾಧನೆಯತ್ತ ಮುಂದಾಗಬೇಕು ಎಂದು ಹೇಮಾವತಿ ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ವೈ.ಆರ್.ಭಾರತೀಗೌಡ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೌಕರರ ಸಂಘದ ಸಹಯೋಗದೊಂದಿಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮನೆ, ಕಚೇರಿ ಕೆಲಸಗಳೊಂದಿಗೆ ಹಲವಾರು ಚಟುವಟಿಕೆಗಳಲ್ಲಿ ಗುರುತಿಸಿ ಕೊಂಡರೆ, ಬೇರೆಯವರು ನಮ್ಮನ್ನು ಗುರುತಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ತಮ್ಮದೇ ಆದ ಛಾಪು ಮೂಡಿಸಬೇಕು. ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು ಎಂದರು.

ಪುರಸಭೆ ಉಪಾಧ್ಯಕ್ಷೆ ಉಷಾ ಮಾತನಾಡಿ, ಮಹಿಳೆಯರು ಇಂದು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವುಗಳ ನಡುವೆ ಕುಟುಂಬಗಳನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಕರಮೂರ್ತಿ ಮಾತನಾಡಿ, ಇತ್ತೀಚೆಗೆ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ತಮ್ಮದೆ ಆದ ಸಾಧನೆಗಳ ಮೂಲಕ ಮನೆ ಮಾತಾಗುತ್ತಿದ್ದಾರೆ. ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಸಿಇಒ, ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಸಾಕಷ್ಟು ಇಲಾಖೆಗಳಲ್ಲಿ ಮಹಿಳೆಯರೆ ಉನ್ನತ ಅಧಿಕಾರಿಗಳಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಮನೋವೈದ್ಯರಾದ ಡಾ.ಪಲ್ಲವಿ, ತಾ.ಪಂ. ಮಾಜಿ ಅಧ್ಯಕ್ಷೆ ಕಮಲಚನ್ನಪ್ಪ, ಅಂಗನವಾಡಿ ಕಾರ್ಯಕರ್ತರ ಮತ್ತು ನೌಕರರ ಸಂಘದ ಅಧ್ಯಕ್ಷರಾದ ಮಂಜುಳಾ, ಕಾರ್ಯದರ್ಶಿ ಕಾಮಾಕ್ಷಿರಾಜು, ಇಲಾಖೆಯ ತೇಜಸ್ವಿನಿ, ಪೂರ್ಣಿಮಾ ಇತರರಿದ್ದರು.