ಚನ್ನರಾಯಪಟ್ಟಣದ ಲೇಡಿಸ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಾಧಕಿಯರನ್ನು ಸನ್ಮಾನಿಸಲಾಯಿತು. ಚಿತ್ರನಟಿ ಸುಧಾರಾಣಿ, ಸಿಡಿಪಿಒ ಇಂದಿರಾ ಇತರರು ಇದ್ದರು. 
ಜಿಲ್ಲೆ

ದೇಶದ ಸಾಧಕರ ಪಟ್ಟಿಯಲ್ಲಿ ಸ್ತ್ರೀ ಅಗ್ರಸ್ಥಾನ ಪಡೆಯಲಿ

ಚನ್ನರಾಯಪಟ್ಟಣ: ಹಲವು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರು ದೇಶದ ಸಾಧಕರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಬೇಕು ಎಂದು ಚಲನಚಿತ್ರ ಹಿರಿಯ ನಟಿ ಸುಧಾರಾಣಿ ಆಶಯ ವ್ಯಕ್ತಪಡಿಸಿದರು.

ಪಟ್ಟಣದ ಸುಮಿತ್ರಾ ಕೆಂಬಾಳು ಪ್ರಕಾಶ್ ಕನ್ವೆಷನ್ ಹಾಲ್‌ನಲ್ಲಿ ಬುಧವಾರ ಲೇಡಿಸ್ ರಿಕ್ರಿಯೇಷನ್ ಕ್ಲಬ್‌ನಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎರಡು ದಶಕಗಳ ಹಿಂದೆ ಮಹಿಳೆಯರು ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗುತ್ತಿದ್ದರು. ಆದರೆ ಇತ್ತೀಚಿನ ದಿವಸಗಳಲ್ಲಿ ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ದೇಶದ ಸಾಕಷ್ಟು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬ ನಿರ್ವಹಣೆ ಮಾಡುವ ಮೂಲಕ ಮನೆಯ ಜವಾಬ್ದಾರಿಯನ್ನು ಹೆಣ್ಣು ಹೊರುತ್ತಿದ್ದಾಳೆ. ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಸಿಇಒ ಆಗುವ ಮೂಲಕ ಸಂಸ್ಥೆಯನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಹಿಳೆ ಮಾಡುತ್ತಿರುವುದು ಹೆಮ್ಮೆ ಎಂದು ತಿಳಿಸಿದರು.

ನಾಲ್ಕೈದು ದಶಗಳ ಹಿಂದೆ ಪ್ರತಿ ಕುಟುಂಬ ಒಂದು ಗಂಡು ಮಗು ಬೇಕು ಎನ್ನುತ್ತಿದ್ದರು, ಐದಕ್ಕೂ ಹೆಣ್ಣು ಮಗುವಾದರೂ ಗಂಡು ಮಗುವಿಗಾಗಿ ಹಂಬಲಿಸುತ್ತಿದ್ದರು. ಈಗ ಕಾಲ ಬದಲಾಗಿದೆ ಹೆಣ್ಣಾಗಲಿ ಗಂಡಾಗಲಿ ಒಂದು ಮಗುವನ್ನು ಪಡೆದು ಉತ್ತಮ ಶಿಕ್ಷಣ ಕೊಡಿಸಿ ದೇಶಕ್ಕೆ ಉತ್ತಮ ಪ್ರಜೆ ಮಾಡುವುದರೊಂದಿಗೆ ಕುಟುಂಬ ನಿರ್ವಹಣೆ ಜವಾಬ್ದಾರಿಯನ್ನು ಕಲಿಸುತ್ತಿದ್ದಾರೆ ಎಂದರು.

ಲೇಡಿಸ್ ಕ್ಲಬ್‌ಗಳು ಮಹಾನಗರದಲ್ಲಿ ಒಟ್ಟಾಗಿ ಸೇರಿ ಪಾರ್ಟಿಗಳನ್ನು ಮಾಡುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿನ ಹಾಗೂ ಪಟ್ಟಣಗಳಲ್ಲಿ ಲೇಡಿಸ್ ಕ್ಲಬ್‌ನ ಸದಸ್ಯರು ಒಟ್ಟಾಗಿ ದೇಶದ ಬಗ್ಗೆ ಚಿಂತಿಸುತ್ತಾರೆ. ನಮ್ಮ ಸಂಸ್ಕೃತಿಯನ್ನು ಉಳಿಸುವ ಕಡೆ ಮುಂದಾಗುತ್ತಿದ್ದಾರೆ. ಆಧುನಿಕ ಯುಗದಲ್ಲಿ ವಿದೇಶ ಸಂಸ್ಕೃತಿಗೆ ಮಾರುಹೋಗಿ ಈ ಮಣ್ಣಿನ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಇದಾಗಬಾರದು ನಮ್ಮ ನೆಲದ ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಕಡೆ ಆಲೋಚಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಇಂದಿರಾ ಮಾತನಾಡಿ, ಮಹಿಳೆಯರು ಒಟ್ಟಾಗಿ ಸಾಕಷ್ಟು ಸವಲತ್ತುಗಳನ್ನು ಸರ್ಕಾರದಿಂದ ಪಡೆಯುತ್ತಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದು ಮಹಿಳಾ ಸಂಘಟನೆಗೆ ಇರುವ ಶಕ್ತಿ ಎಂದರು.

ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ಹೇಮಾಬಾಬು, ವನಜಾ ಧಮೇಂದ್ರ, ನೇತ್ರಾನವೀನ್ ಅವರನ್ನು ಸನ್ಮಾನಿಸಲಾಯಿತು. ಲೇಡಿಸ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷೆ ಸಿ.ಕೆ.ಕುಸುಮಾರಾಣಿ , ಕ್ಲಬಿನ ಮುಖ್ಯಸ್ಥರಾದ ವಾಣಿ ರವೀಶ್, ಗೀತಾಬಾಲಕೃಷ್ಣ, ಗಿರಿಜಾಗಂಗಾಧರ್, ನೇತ್ರಾನವೀನ್, ರಮ್ಯಾಆನಂದ್, ವೀಣಾಚಿದಂಬರ್, ಅಂಬಿಕಾರಾಮಣ್ಣ, ನಾಗರತ್ನಾ ಶೇಖರ್ ಹಾಗೂ ಕ್ಲಬ್‌ನ ಸರ್ವ ಸದಸ್ಯರು ಇದ್ದರು.