ಮೈಸೂರು: ಮಾನಸಿಕ ಗುಲಾಮಗಿರಿಯಿಂದ ಸ್ತ್ರೀ ಬಿಡುಗಡೆಯಾಗಬೇಕಾದರೆ ಸ್ತ್ರೀವಾದಿ ಚಳವಳಿಯಲ್ಲಿ ಪುರುಷರು ಭಾಗವಹಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ.ಟಿ.ಎಸ್.ಸುಬ್ರಹ್ಮಣ್ಯ ಹೇಳಿದರು.
ಸಮತಾ ಅಧ್ಯಯನ ಕೇಂದ್ರದಿಂದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ, ಕಾವ್ಯ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ತ್ರೀವಾದಿಗಳು ಪುರುಷರ ವಿರುದ್ಧವಲ್ಲ. ಪುರುಷರ ಕೆಟ್ಟ ವ್ಯವಸ್ಥೆಯ ವಿರುದ್ಧ ಎನ್ನ್ನುವುದನ್ನು ಲೇಖಕಿ ಡಾ.ವಿಜಯಾದಬ್ಬೆ ಮನಗಂಡಿದ್ದರು. ಅವರು ಕಾಲೇಜು ದಿನಗಳಲ್ಲಿಯೇ ಯಾವುದಕ್ಕೂ ಹೆದರದವರಾಗಿದ್ದರು. ಅಪಾರ ಕನಸು, ನಿರಂತರ ಓದು ಅಳವಡಿಸಿಕೊಂಡಿದ್ದರು. ಆರ್ಥಿಕವಾಗಿ ಸದೃಢರಾಗಲು ಉದ್ಯೋಗ ಹಿಡಿಯಲು ಯತ್ನಿಸಿದರು. ಉದ್ಯೋಗ ಸಿಗದಿದ್ದಾಗ ಪ್ರಾಮಾಣಿಕವಾಗಿದ್ದರೆ ಸಮಾಜದಲ್ಲಿ ಬೆಲೆ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದರು ಎಂದರು.
ಬದುಕಿನಲ್ಲಿ ತುಂಬ ಕಷ್ಟಪಟ್ಟ ವಿಜಯಾ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಒಳ್ಳೆಯ ಅಧ್ಯಾಪಕಿ ಎನಿಸಿಕೊಂಡರು. ಸಾಹಿತ್ಯ ವಲಯದಲ್ಲೂ ಗುರುತಿಸಿಕೊಂಡರು. ಹೋರಾಟಗಾರ್ತಿಯಾಗಿ ಒಂದು ನೆಲೆಯನ್ನು ಮುಟ್ಟಿದರು ಎಂದರು.
ತನ್ನ ಕುಟುಂಬವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತೆನೆಂದು ಬಲವಾಗಿ ನಂಬಿದ್ದರು. ವಿದೇಶಿ ವ್ಯಕ್ತಿಯನ್ನು ಪತಿಯಾಗಿ ಸ್ವೀಕರಿಸಿದರು. ಇದಕ್ಕೆ ಕುಟುಂಬದ ಸಹಕಾರ ಸಿಗದಿದ್ದಾಗ ನೊಂದುಕೊಂಡರು ಎಂದು ವಿವರಿಸಿದರು.
ಪ್ರಪಂಚವನ್ನು ಗೆಲ್ಲುತ್ತೇನೆ ಎನ್ನುವ ಹಂಬಲ ಇಟ್ಟುಕೊಂಡಿದ್ದ ಅವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ನೆನಪಿನ ಶಕ್ತಿ ಕಳೆದುಕೊಂಡರು. ನಾಗಚಂದ್ರನ ಬಗ್ಗೆ ಸಂಶೋಧನೆ ಮಾಡಿ ಪಿಎಚ್.ಡಿ ಪದವಿ ಪಡೆದವರು ಮತ್ತೆ ಅಆಇಈ ಕಲಿಯಬೇಕಾಯಿತು. ವೈದ್ಯ ಲೋಕವೇ ಅಚ್ಚರಿಪಡುವಂತೆ ಓದಲು, ಮಾತನಾಡಲು ಶುರು ಮಾಡಿದ್ದ ಅವರ ಆತ್ಮಶಕ್ತಿಗೆ ಸಾಕ್ಷಿಯಾಗಿತ್ತು ಎಂದು ಹೇಳಿದರು.
ಲೇಖಕಿ ಡಾ.ಸಬೀಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜು ಡೀನ್ ಡಾ.ಶಶಿಕಲಾ ಗುರುಪುರ ಪ್ರಶಸ್ತಿ ಪ್ರದಾನ ಮಾಡಿದರು.
ಸ್ಪರ್ಧೆಯ ತೀರ್ಪುಗಾರರಾಗಿದ್ದ ಕನ್ನಡ ಸಹ ಪ್ರಾಧ್ಯಾಪಕ ಡಾ. ಆನಂದ್ ಗೋಪಾಲ್ ಕಾವ್ಯ ಕುರಿತು ಮಾತನಾಡಿದರು. ಡಾ. ಆರ್.ಎಸ್. ಅಶ್ವಿನಿ ಪ್ರಬಂಧಗಳ ಬಗ್ಗೆ ವಿಶ್ಲೇಷಿಸಿದರು.
ಸಮತಾ ಅಧ್ಯಯನ ಕೇಂದ್ರದ ಧರ್ಮದರ್ಶಿ ಡಾ. ರಾಮಕೃಷ್ಣ ಜೋಷಿ, ಉಪಾಧ್ಯಕ್ಷೆ ಬಿ.ಸಿ. ಮಂಜುಳಾ, ಕಾರ್ಯದರ್ಶಿ ಆರ್.ಸುನಂದಮ್ಮ, ಸಹ ಕಾರ್ಯದರ್ಶಿ ಪಿ.ಓಂಕಾರ್, ಖಜಾಂಚಿ ವಿಜಯಾರಾವ್ ಇದ್ದರು.
ಡಾ.ಎಂ.ಉಷಾ ಅವರಿಗೆ ಪ್ರಶಸ್ತಿ ಪ್ರದಾನ:
ವಿಜಯವಾಣಿ ಸುದ್ದಿಜಾಲ ಮೈಸೂರು
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಎಂ.ಉಷಾ ಅವರ ‘ಬಾಳ ಬಟ್ಟೆ’ ಕಾದಂಬರಿಗೆ 2024ನೇ ಸಾಲಿನ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. 25 ಸಾವಿರ ರೂ. ನಗದು ಬಹುಮಾನ, ಫಲಕ ನೀಡಿ ಸನ್ಮಾನಿಸಲಾಯಿತು. ಕೃತಿಯನ್ನು ಶಿವಮೊಗ್ಗದ ‘ಅಹರ್ನಿಶಿ’ ಪ್ರಕಾಶನ ಪ್ರಕಟಿಸಿದೆ. ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾವ್ಯ ವಿಭಾಗದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವೈ.ಎಸ್. ಅಭಿಷೇಕ್ (ಪ್ರಥಮ), ದಾವಣಗೆರೆ ವಿಶ್ವ ವಿದ್ಯಾಲಯದ ಕೆ.ರುಜುವಾನ (ದ್ವಿತೀಯ), ಅಮಿತಾ ಎಂ. ಕುಡಚೆ (ತೃತೀಯ) ಬಹುಮಾನ ಪಡೆದುಕೊಂಡರು.
ಲಲಿತಪ್ರಬಂಧ ವಿಭಾಗದಲ್ಲಿ ಕಾಸರಗೋಡು ಕೇರಳ ಕೇಂದ್ರಿಯ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಆರ್.ನವ್ಯಾ (ಪ್ರಥಮ), ಕೊಡಗಿನ ಡಾ. ಕೆ.ಎಸ್. ಮುಸ್ತಫಾ (ದ್ವಿತೀಯ), ಮಂಗಳೂರು ವಿಶ್ವವಿದ್ಯಾಲಯದ ಎಸ್.ಸಂಧ್ಯಾ ತೃತೀಯ ಬಹುಮಾನಗಳನ್ನು ಸ್ವಿಕರಿಸಿದರು. ಅಲ್ಲದೆ ತೀರ್ಪುಗಾರರ ಮೆಚ್ಚುಗೆ ಪಡೆದ ಕವಿಗಳು, ಪ್ರಬಂಧ ಲೇಖಕರನ್ನು ಸನ್ಮಾನಿಸಲಾಯಿತು.