Let water be distributed appropriately. 
ಜಿಲ್ಲೆ

ನೀರು ಸಮರ್ಪಕವಾಗಿ ಹಂಚಿಕೆಯಾಗಲಿ

ಮುಧೋಳ: ಬೇಸಿಗೆಯಲ್ಲಿ ಹಿಡಕಲ್ ಜಲಾಶಯದಿಂದ ಘಟಪ್ರಭ ನದಿಗೆ ಮತ್ತು ಕಾಲುವೆಗೆ ನೀರು ಹರಿಸಲಾಗುತ್ತದೆ. ಈ ನೀರು ಜಲಾಶಯದಿಂದ ಜಿಲ್ಲೆಯ ಗಡಿಭಾಗ ದಾಟುವುದಿಲ್ಲ. ನೀರಿನ ಸಮರ್ಪಕ ಹಂಚಿಕೆಗೆ ಕ್ರಮಕೈಗೊಳ್ಳಬೇಕು ಎಂದು ರೈತ ಮುಖಂಡ ಬಸವಂತಪ್ಪ ಕಾಂಬಳೆ ಆಗ್ರಹಿಸಿದರು.

ನಗರದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಪ್ರಭ ನದಿಗೆ ಮತ್ತು ಕಾಲುವೆಗೆ ಬಿಟ್ಟಿರುವ ನೀರು ಕೃಷ್ಣಾ ನದಿಗೆ ಹರಿದು ಹೋಗುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಚಿಮ್ಮಡ ಮುಖ್ಯ ಕಾಲುವೆಗೆ ಕಡಿಮೆ ನೀರು ಬರುತ್ತಿರುವುದರಿಂದ ಉಪ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಇದರಿಂದ ಕಾಲುವೆ ನೀರನ್ನೇ ಅವಲಂಬಿತ ರೈತರು ಪರದಾಡುವಂತಾಗಿದೆ ಎಂದರು.

ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಪೂರೈಸಿ ನಾಲ್ಕೈದು ತಿಂಗಳಾದರೂ ಈವರೆಗೂ ಪೂರ್ಣ ಪ್ರಮಾಣದ ಬಿಲ್ ಪಾವತಿಸಿಲ್ಲ. ಮೇ 25ರೊಳಗಾಗಿ ಬಾಕಿ ಪಾವತಿಸಲು ಕ್ರಮವಹಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದರು.

ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ, ದುಂಡಪ್ಪ ಯರಗಟ್ಟಿ, ಮಹೇಶ ಪಾಟೀಲ, ಅಶೋಕ ಪಡಸಲಗಿ, ಹಣಮಂತಗೌಡ ಪಾಟೀಲ ಇದ್ದರು.