ಜಿಲ್ಲೆ

ವಜ್ರಕುಮಾರರ ಆದರ್ಶಗಳು ಸ್ಫೂರ್ತಿಯಾಗಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಡಾ. ನ.ವಜ್ರಕುಮಾರ ದ ಆಡಳಿತಗಾರರಾಗಿದ್ದರು. ಜೆಎಸ್​ಎಸ್​ ಅನ್ನು ಉತ್ಕೃಷ್ಠ ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಆದರ್ಶ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಸ್ಫೂರ್ತಿಯಾಗಬೇಕು ಎಂದು ಜೆಎಸ್​ಎಸ್​ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದ ಜನತಾ ಶಿಕ್ಷಣ ಸಮಿತಿ ಆವರಣದಲ್ಲಿ ಸ್ಥಾಪಿಸಿರುವ ಕೀರ್ತಿಶೇಷ ಡಾ. ನ. ವಜ್ರಕುಮಾರ ಪುತ್ಥಳಿಯನ್ನು ಗುರುವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

ಸದಾ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಅನೇಕ ಯೋಜನೆಗಳನ್ನು ರೂಪಿಸಿ, ವಿದ್ಯಾ ಸಂಸ್ಥೆಗಳನ್ನು ನಿರ್ಮಿಸಿದ ಕಾಯಕಯೋಗಿ. ಅವರ ಹೆಸರಿನಂತೆ ಕೆಲಸ ಕಾರ್ಯಗಳಲ್ಲಿ ಉತ್ತಮ ತೇಜಸ್ಸನ್ನು, ದಿಟ್ಟ ಹಾಗೂ ಧೈರ್ಯತನ ಹೊಂದಿದ್ದ ವ್ಯಕ್ತಿತ್ವ ಅವರದು. ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದು ದೇವಾಲಯಗಳನ್ನು ನಿರ್ಮಿಸಿದಷ್ಟೇ ಪುಣ್ಯದ ಕೆಲಸ. ಈ ಧಾರಾನಗರಿಯಲ್ಲಿ ಇಂತಹ ಸಾಧನೆಗೆ ಅಡಿಪಾಯ ಹಾಕಿದವರು ವಜ್ರಕುಮಾರ ಎಂದರು.

ಜನತಾ ಶಿಕ್ಷಣ ಸಮಿತಿ ಬೆಳೆಸಿದ ವಜ್ರಕುಮಾರ, ಎಸ್​ಡಿಎಂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲೂ ಪ್ರಮುಖ ಪಾತ್ರ ವಹಿಸಿದರು. 1973ರಲ್ಲಿ ಸಂಕಷ್ಟದಲ್ಲಿದ್ದ ಜೆಎಸ್​ಎಸ್​ ಅನ್ನು ಮತ್ತೆ ಗರಿಗೆದರುವಂತೆ ಮಾಡಿ ಇಂದು 25 ಅಂಗ ಸಂಸ್ಥೆಗಳಲ್ಲಿ, 22000 ವಿದ್ಯಾರ್ಥಿಗಳು ಹಾಗೂ 1300 ಸಿಬ್ಬಂದಿ ವರ್ಗ ಒಳಗೊಂಡ ಸಂಸ್ಥೆ ಕಟ್ಟಿದ ಧೀಮಂತರು. ಅವರ ಮಾರ್ಗದಲ್ಲೇ ಡಾ. ಅಜಿತ ಪ್ರಸಾದ ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಜೆಎಸ್​ಎಸ್​ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಇಡೀ ಜೀವನವನ್ನೇ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟ ವ್ಯಕ್ತಿ ವಜ್ರಕುಮಾರ. ಸಂಸ್ಥೆಗಳ ಸಿಬ್ಬಂದಿ ವರ್ಗವನ್ನು ಕುಟುಂಬದ ಸದಸ್ಯರಂತೆ ಕಾಣುತ್ತಿದ್ದರು. ವಜ್ರಕುಮಾರ ಹೆಸರು, ಕೆಲಸ ಅಜರಾಮರವಾಗಲಿ ಎಂದ ಉದ್ದೇಶದಿಂದ ಜೆಎಸ್​ಎಸ್​ ಆವರಣದಲ್ಲಿ ವಜ್ರಸ್ತಂಭ ನಿರ್ಮಿಸಿದ್ದಾರೆ ಎಂದರು.

ಆಡಳಿತ ಮಂಡಳಿ ಸದಸ್ಯರಾದ ಶ್ರೀಕಾಂತ ಕೆಮ್ತೂರ, ಎಸ್​ಡಿಎಂ ಸಂಸ್ಥೆ ಕಾರ್ಯದರ್ಶಿ ಜೀವಂಧರಕುಮಾರ, ಜೆಎಸ್​ಎಸ್​ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಇತರರು ಇದ್ದರು.