ಶಿವಮೊಗ್ಗ ಗಮಕ ದಸರಾದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷ ಡಾ. ಎ.ವಿ.ಪ್ರಸನ್ನ ಮಾತನಾಡಿದರು. ಎಸ್.ಎನ್.ಚನ್ನಬಸಪ್ಪ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಆರ್.ಸುಬ್ರಹ್ಮಣ್ಯಶಾಸ್ತ್ರಿ, ಟಿ.ಆರ್.ಅನುಪಮಾ ಇದ್ದರು. 
ಜಿಲ್ಲೆ

ಗಮಕದಲ್ಲಿ ವಚನ ಸಾಹಿತ್ಯ ಒಳಗೊಳ್ಳಲಿ: ಡಾ. ಎ.ವಿ.ಪ್ರಸನ್ನ

ಶಿವಮೊಗ್ಗ: ಶರಣರ ವಚನ ಸಾಹಿತ್ಯವನ್ನು ಗಮಕಕ್ಕೆ ಒಳಪಡಿಸುವ ಮೂಲಕ ಗಮಕವನ್ನು ಮತ್ತಷ್ಟು ವಿಸ್ತರಿಸಬೇಕಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷ ಡಾ. ಎ.ವಿ.ಪ್ರಸನ್ನ ಹೇಳಿದರು.

ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಭಾನುವಾರ ಮಹಾನಗರ ಪಾಲಿಕೆ ಮತ್ತು ಶಿವಮೊಗ್ಗ ಕರ್ನಾಟಕ ಗಮಕ ಕಲಾ ಪರಿಷತ್‌ನಿಂದ ಪ್ರಥಮ ಬಾರಿಗೆ ಆಯೋಜಿಸಿದ್ದ ಗಮಕ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಗಮಕಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಅದು ಹೆಚ್ಚಾಗಬೇಕಾದರೆ ನಮ್ಮೊಂದಿಗೆ ಸಮಾಜದ ಇತರೆ ವರ್ಗಗಳೂ ಸೇರಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇದೊಂದು ವಿಶಿಷ್ಟ ಕಲೆ. ಇದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ ಎಂಬುದೇ ಶ್ಲಾಘನೀಯ. ಪಂಪನ ಕಾಲದಿಂದಲೂ ಈ ಕಲೆಯನ್ನು ಉಳಿಸಿಕೊಂಡು ಬರಲಾಗಿದೆ. ಇದು ನಶಿಸುತ್ತಿದೆ ಎಂದಾದರೆ ಇಷ್ಟರಲ್ಲಿಯೇ ಇದು ಜನಮಾನಸದಿಂದ ದೂರವಾಗುತ್ತಿತ್ತು. ದೀರ್ಘ ಕಾಲದಿಂದ ಇದು ಉಳಿದಿದ್ದು, ಮುಂದೆಯೂ ಇದಕ್ಕೆ ಬಾಧಕವಿಲ್ಲ. ಗಮಕ ಕಲೆಗೆ ಎಲ್ಲ ಸರ್ಕಾರಗಳು ಪ್ರೋತ್ಸಾಹ ನೀಡುತ್ತಲೇ ಬಂದಿವೆ. ಪರಿಣಾಮ ಇದರ ಬಗ್ಗೆ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.
ಗಮಕದ ಬಗ್ಗೆ ದಕ್ಷಿಣ ಕನ್ನಡದಲ್ಲಿ ವಿಶೇಷವಾದ ಪ್ರೀತಿ ಮೊದಲಿನಿಂದಲೂ ಇದೆ. ಮಲೆನಾಡು, ಕರಾವಳಿ ಭಾಗದಲ್ಲಿ ಗಮಕಿಗಳಿದ್ದಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಈ ಕಲೆ ಪ್ರಚಲಿತದಲ್ಲಿಲ್ಲ. ಹೀಗಾಗಿ ಉತ್ತರ ಭಾಗಕ್ಕೂ ಗಮಕ ಪ್ರವೇಶ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಆಸಕ್ತಿ ವಹಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಇದೀಗ ನಾಡಹಬ್ಬದಲ್ಲಿ ಗಮಕ ದಸರಾ ಮಾಡಿ ಇಡೀ ರಾಜ್ಯಕ್ಕೆ ಶಿವಮೊಗ್ಗ ಜಿಲ್ಲೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಶಿವಮೊಗ್ಗ ದಸರಾದಲ್ಲಿ ಗಮಕ ದಸರಾ ಆಯೋಜನೆಗೊಂಡಿದೆ. ಈ ಮೂಲಕ ಮಹಾನಗರ ಪಾಲಿಕೆ ಹೊಸ ಪರಂಪರೆಗೆ ನಾಂದಿ ಹಾಡಿದೆ. ಶಿವಮೊಗ್ಗದಲ್ಲಿ ಮತ್ತೂರು ಸಂಸ್ಕೃತ ಗ್ರಾಮವೆಂಬ ಹೆಗ್ಗಳಿಕೆ ಪಡೆದಿದ್ದರೆ, ಪಕ್ಕದ ಹೊಸಹಳ್ಳಿ ಗಮಕಕ್ಕೆ ಖ್ಯಾತಿ ಪಡೆದಿದೆ. ಇದೇ ಗ್ರಾಮದ ಖ್ಯಾತ ಗಮಕ ಕಲಾವಿದ ಎಚ್.ಆರ್.ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪುರಸ್ಕಾರ ಒಲಿದಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.
ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಾತನಾಡಿ, ಕಲೆಗೆ ಭಾಷೆ ಇಲ್ಲ. ಎಲ್ಲೆ ಇಲ್ಲ. ನೇರವಾಗಿ ಕೇಳುಗರ ಹೃದಯ ತಟ್ಟುವ ಪ್ರಕಾರ ಇದಾಗಿದೆ. ಯುವ ಪೀಳಿಗೆ ಈ ಕಲೆಯಲ್ಲಿ ತೊಡಗುವಂತೆ ಮಾಡಬೇಕಿದೆ ಎಂದರು.
ಗಮಕ ದಸರಾದಲ್ಲಿ ವಿಚಾರಗೋಷ್ಠಿ, ರಾಜ್ಯಮಟ್ಟದ ಗಮಕ ಸ್ಪರ್ಧೆ, ಕವಿ-ಕಾವ್ಯ ಪರಿಚಯ, ರಸಪ್ರಶ್ನೆ, ರೂಪಕ, ಹಿರಿಯ ಕಲಾವಿದರಿಂದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮಗಳು ನಡೆದವು. ಪರಿಷತ್‌ನ ಜಿಲ್ಲಾ ಗೌರವಾಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಅಧ್ಯಕ್ಷ ಎಚ್.ಆರ್.ಸುಬ್ರಹ್ಮಣ್ಯಶಾಸ್ತ್ರಿ, ಅಕಾಡೆಮಿ ರಿಜಿಸ್ಟ್ರಾರ್ ದಕ್ಷಿಣಾಮೂರ್ತಿ, ಗಮಕ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿ ಟಿ.ಆರ್.ಅನುಪಮಾ ಉಪಸ್ಥಿತರಿದ್ದರು.