ಬಜರಂಗದಳ ಶೌರ್ಯ ಜಾಗರಣಾ ರಥಯಾತ್ರೆಯನ್ನು ಬೈಕ್ ರ‌್ಯಾಲಿಯ ಮೂಲಕ ತೀರ್ಥಹಳ್ಳಿಗೆ ಸ್ವಾಗತಿಸಲಾಯಿತು. 
ಜಿಲ್ಲೆ

ಹಿಂದುತ್ವದ ಉಳಿವಿಗೆ ಒಂದಾಗೋಣ: ಹೊರಣೆಬೈಲು ರಾಮಚಂದ್ರ

ತೀರ್ಥಹಳ್ಳಿ: ಸನಾತನ ಧರ್ಮದ ಉಳಿವಿಗಾಗಿ ಧರ್ಮ ರಕ್ಷಕರಾದ ನಾವು ಹೆಚ್ಚಿನ ಸಮಯ ಮೀಸಲಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಧರ್ಮದ ವಿರುದ್ಧದ ಧ್ವನಿಗಳನ್ನು ಅಡಗಿಸಲು ನಾವೆಲ್ಲ ಅಧ್ಯಯನಶೀಲರಾಗಬೇಕು ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಬೌದ್ಧಿಕ್ ಪ್ರಮುಖ ಹೊರಣೆಬೈಲು ರಾಮಚಂದ್ರ ಹೇಳಿದರು.
ಬುಧವಾರ ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ ಪಟ್ಟಣವನ್ನು ಪ್ರವೇಶಿಸಿದ ಕರ್ನಾಟಕ ದಕ್ಷಿಣ ಪ್ರಾಂತದ ವಿಶ್ವ ಹಿಂದು ಪರಿಷತ್ ಬಜರಂಗದಳ ಶೌರ್ಯ ಜಾಗರಣಾ ರಥಯಾತ್ರೆಯನ್ನು ಬೈಕ್ ರ‌್ಯಾಲಿ ಮೂಲಕ ಸ್ವಾಗತಿಸಿ, ಮುಖ್ಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರದ ಏಕತೆ, ಸಮಾಜದ ಆರೋಗ್ಯ ರಕ್ಷಣೆ ಸೇರಿ ಬಜರಂಗದಳದ ಪ್ರಮುಖವಾದ ಮೂರು ಧ್ಯೇಯಗಳನ್ನು ಈಡೇರಿಸುವ ಗುರಿ ಹೊಂದಿದೆ. ಆರೋಗ್ಯ ರಕ್ಷಣೆಗಾಗಿ ಪ್ರತಿವರ್ಷ 50 ಸಾವಿರ ಯೂನಿಟ್‌ಗಿಂತಲೂ ಹೆಚ್ಚಿನ ರಕ್ತ ಸಂಗ್ರಹಿಸಿ ದಾನ ಮಾಡಲಾಗಿದೆ. ಧಾರ್ಮಿಕ ಸಂಸ್ಕಾರ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಸಮಾಜದ ಶಾಂತಿ ಕಾಪಾಡುವಲ್ಲಿಯೂ ನಿರತರಾಗಿದ್ದೇವೆ. ಸನಾತನ ಹಿಂದು ಧರ್ಮದ ಉಳಿವು ಮತ್ತು ರಕ್ಷಣೆಗಾಗಿ ಜೀವವನ್ನೇ ಮುಡಿಪಾಗಿಡಬೇಕಾಗಿದೆ ಎಂದು ಹೇಳಿದರು.
ಸಂಘಟನೆಯ ತಾಲೂಕು ಕಾರ್ಯವಾಹ ಸಂತೋಷ್ ಬಾಳೇಬೈಲು, ಕ್ಯಾದಿಗೆರೆ ಲೋಹಿತಾಶ್ವ, ಸಂಚಾಲಕರಾದ ಮಹಾಂತೇಶ್, ಗೋರಕ್ಷಾ ಸಮಿತಿ ಪ್ರಮುಖ ಗಣೇಶ್‌ಪ್ರಸಾದ್ ದೇವಾಡಿಗ, ಬಿಜೆಪಿ ಮುಖಂಡರಾದ ಕುಕ್ಕೆ ಪ್ರಶಾಂತ್, ಮಧು ಹೆಗ್ಡೆ ತೂದೂರು, ರಕ್ಷಿತ್ ಮೇಗರವಳ್ಳಿ, ಯಶಸ್ವಿ ಕಡ್ತೂರು ಮುಂತಾದವರಿದ್ದರು.