ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ಪ್ರಗತಿ ಪರಿಶೀಲನೆ ಸಭೆಯ ನಡೆಸಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು. ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ ಮತ್ತಿತರರಿದ್ದಾರೆ.  
ಜಿಲ್ಲೆ

ಅಲೆಮಾರಿ ಸಮುದಾಯ ಮುಖ್ಯವಾಹಿನಿಗೆ ತರಲು ಶ್ರಮಿಸೋಣ; ಪಲ್ಲವಿ ಜಿ

Vijyapura - Parsuram Bhasagi

ವಿಜಯಪುರ: ಸ್ವ ಉದ್ಯೋಗ, ವೃತ್ತಿ ಕೌಶಲತೆ, ಶಿಕ್ಷಣಕ್ಕೆ ಆದ್ಯತೆ ನೀಡಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಆರ್ಥಿಕ ಬೆಂಬಲ ನೀಡುವ ಯೋಜನೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಜನಾಂಗಕ್ಕೆ ದೊರಕಿಸಲು ಅಧಿಕಾರಿಗಳು ಇಚ್ಛಾಶಕ್ತಿ ಹಾಗೂ ಅಂತಕರಣದಿಂದ ಕಾರ್ಯನಿರ್ವಹಿಸಿ ಇಂತಹ ಸಮುದಾಯದವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಸಮುದಾಯ ಆರ್ಥಿಕವಾಗಿ ಸದೃಢಗೊಳ್ಳುವುದರೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಅಧಿಕಾರಿಗಳು ಯೋಜನೆಗಳ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಗಳಿಗೆ ಸರ್ಕಾರ ನೀಡುವ ಆರ್ಥಿಕ ಬೆಂಬಲದ ಯೋಜನೆಗಳ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೂಕ್ತ ಜಾಗೃತಿ ಮೂಡಿಸುವಂತೆ ಅವರು ಸೂಚನೆ ನೀಡಿದರು.

ಯೋಜನೆಗಳ ಜಾಗೃತಿ ಅವಶ್ಯ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವು ಯೋಜನೆಗಳನ್ನು ನೀಡಿದೆ. ಈ ಸಮುದಾಯದ ಜನರಿಗೆ ಸರ್ಕಾರದ ಯೋಜನೆಗಳ ಜಾಗೃತಿ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಯೋಜನೆಗಳ ಸಂಪೂರ್ಣ ಅರಿವನ್ನು ಜನರಲ್ಲಿ ಮೂಡಿಸಿ, ಅರ್ಹರಿಗೆ ಲಾಭ ದೊರಕಿಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.

ವಿವಿಧ ವಸತಿ ಶಾಲೆಗಳಲ್ಲಿ ಈ ಸಮುದಾಯ ಮಕ್ಕಳಿಗೆ ಆದ್ಯತೆಯ ಮೇರೆಗೆ ಯಾವುದೇ ಪ್ರವೇಶ ಪರೀಕ್ಷೆ ನಡೆಸದೇ ಪ್ರವೇಶಾವಕಾಶ ದೊರಕಿಸಲು ಸರ್ಕಾರ ಅವಕಾಶ ನೀಡಿದ್ದು, ಇದರ ಸದ್ಬಳಕೆಯಾಗಿ ಈ ಸಮುದಾಯದ ಮಕ್ಕಳು ಉನ್ನತ, ಗುಣಮಟ್ಟದ ಶಿಕ್ಷಣ ಪಡೆದುಕೊಂಡು, ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆಗಳ ಮೂಲಕ ಅನುವು ಮಾಡಿಕೊಡಬೇಕು. ನಿಗಮದಿಂದ ದೊರೆಯುವ ಸರ್ಕಾರದ ಹಲವು ಸೌಲಭ್ಯ-ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ, ಅರ್ಹರು ಈ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯೋಜನೆಗಳ ಕುರಿತು ಸೂಕ್ತ ಅರಿವು ಮೂಡಿಸಬೇಕು. ನಿವೇಶನ ರಹಿತ ಅಲೆಮಾರಿ ಕುಟುಂಬಗಳ ಸರ್ಕಾರಿ ಭೂಮಿಯನ್ನು ಗುರುತಿಸುವ ಕಾರ್ಯ ಕೈಗೊಳ್ಳಬೇಕು. ವಸತಿ ರಹಿತ-ವಸಹಿತರ ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ವಸತಿ ಯೋಜನೆಯಡಿ ನಿಗದಿಪಡಿಸಲಾದ ಭೌತಿಕ ಗುರಿಗಳಗನುಗುಣವಾಗಿ ವಿವಿಧ ಹಂತಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಆದ್ಯತೆಯ ಮೇಲೆ ಇತ್ಯರ್ಥಪಡಿಸಬೇಕು. ಉದ್ಯಮಶೀಲತಾ ಯೋಜನೆಯಡಿ ಫಲಾನುಭವಿಗಳ ಯೋಜನೆಯನ್ನು ಸಾಕಾರಗೊಳಿಸಬೇಕು. ಈ ಬಗ್ಗೆ ಬ್ಯಾಂಕ್‌ಗಳು ಸಹ ಅಗತ್ಯ ದಾಖಲೆಗಳನ್ನು ಪಡೆದು, ಸ್ವಾವಲಂಬಿ ಜೀವನ ನಡೆಸಲು ಸ್ವ ಉದ್ಯೋಗ ಕೈಗೊಳ್ಳಲು ಸಾಲ-ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು ಎಂದರು.

ಕುಂದು-ಕೊರತೆ ಆಲಿಕೆ

ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡು ಈ ಸಮುದಾಯಗಳ ವಿವಿಧ ಕಾಲನಿಗಳಿಗೆ ಭೇಟಿ ನೀಡಿ, ಕುಂದು-ಕೊರತೆಗಳನ್ನು ಆಲಿಸಲಾಯಿತು. ಕೊಲ್ಹಾರದಲ್ಲಿರುವ ಹರಿಣಶಿಕಾರಿ ಕಾಲನಿ, ಇಂಡಿಯ ಬಬಲಾದಿಯ ಚನ್ನದಾಸರ ಕಾಲನಿ, ಚವಡಿಹಾಳ, ಇಂಡಿ ಪಟ್ಟಣದ ಹರಿಣಶಿಕಾರಿ ಕಾಲನಿ, ಮಾವಿನಹಳ್ಳಿಯ ಚನ್ನದಾಸರ ಕಾಲನಿ, ವಿಜಯಪುರದ ಕುಂಚಿ-ಕೊರವರ ಓಣಿ, ಸಂಜಯ ಗಾಂಧಿ ಕಾಲನಿಯ ಹಂದಿಜೋಗಿ ಸಮುದಾಯದವರು ವಾಸಿಸುತ್ತಿರುವ ಕಾಲನಿಗಳಿಗೆ ಭೇಟಿ ನೀಡಿ, ಅವರ ಕುಂದು ಕೊರತೆಗಳನ್ನು ಆಲಿಸಲಾಗಿದೆ. ಈ ಸಂದರ್ಭದಲ್ಲಿ ಅತಿ ಹೆಚ್ಚು ಮೂಲ ಸೌಲಭ್ಯಗಳು ಕಲ್ಪಿಸುವ ಕುಂದು-ಕೊರತೆಗಳಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಅಗತ್ಯ ಕ್ರಮ ವಹಿಸಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆ, ಕುಂದು-ಕೊರತೆ, ಪ್ರಗತಿ ಪರಿಶೀಲನಾ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಿ, ಈ ಸಮುದಾಯ ಕುಂದು-ಕೊರತೆಗಳನ್ನು ಪರಿಹರಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಕಾಲನಿಗಳಲ್ಲಿ ಗ್ರಂಥಾಲಯ ಬೇಡಿಕೆ

ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ಜನಾಂಗದವರಿಂದ ಕಾಲನಿಗಳಲ್ಲಿ ಗ್ರಂಥಾಲಯ ಬೇಡಿಕೆ ಸಲ್ಲಿಸಲಾಗಿದ್ದು, ಈ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಆದ್ಯತೆಯ ಮೇಲೆ ಈ ಮನವಿಯನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಈಗಾಗಲೇ 201 ಗ್ರಂಥಾಲಯಗಳಿದ್ದು, 280 ಮಂಜೂರಾಗಿದ್ದು, ಈ ಸಮುದಾಯದ ಬೇಡಿಕೆಯನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.

ಎಎಸ್‌ಪಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದಕುಮಾರ, ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರಿದ್ದರು.