ಹುಬ್ಬಳ್ಳಿ: ಉಳ್ಳವರು, ಇಲ್ಲದವರ ಬಗ್ಗೆ ಕನಿಕರ, ಕಾಳಜಿ ತೋರಬೇಕು. ಭಾವಸಾರ ಸಮಾಜದ ಬಡವರ ಏಳಿಗೆಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ರಾಜು ಜವಳಕರ ಸಲಹೆ ನೀಡಿದರು.
ಗೋಕುಲ ರಸ್ತೆಯ ಚವ್ಹಾಣ ಗ್ರೀನ್ ಗಾರ್ಡನ್ನಲ್ಲಿ ಬುಧವಾರ ಏರ್ಪಡಿಸಿದ್ದ ಭಾವಸಾರ ಕ್ಷತ್ರಿಯ ಸಹಕಾರಿ ಪತ್ತಿನ ಸಂಘದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾವಸಾರ ಪತ್ತಿನ ಸಹಕಾರ ಸಂಘ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ನಮ್ಮ ಸಮಾಜದವರೇ ಕಾರಣ. ಹಾಗೆಯೇ ನಮ್ಮ ಸಮಾಜದ ಜನರ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು. ಬಡ ಮಕ್ಕಳ ಓದಿಗೆ ಸ್ಕಾಲರ್ಶಿಪ್, ವಧು-ವರರ ಸಮಾವೇಶ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷ ಶ್ರೀನಿವಾಸ ಪಿಸ್ಸೆ ಮಾತನಾಡಿ, ನಮ್ಮ ಸಮಾಜದ ಆಗು-ಹೋಗುಗಳ ಬಗ್ಗೆ ನಾವೆಲ್ಲರೂ ಗಮನಹರಿಸಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಸಂಘಟಿತರಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಸಮಾಜದ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಅಲ್ಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುವುದು. ನಮ್ಮ ಸಮಾಜದ ಅಭಿವೃದ್ಧಿಗೆ ಬೇಕಾದ ಸವಲತ್ತುಗಳನ್ನು ಇದೇ ವೇಳೆ ಕೇಳಲಾಗುವುದು ಎಂದರು.
ಉದ್ಯಮಿ ರಮೇಶ ತಾಪ್ಸೆ, ಸಹಕಾರ ಸಂಘಗಳ ಉಪ ನಿಬಂಧಕಿ ರಂಜನಾ ಪೋಳ ಇತರರು ಮಾತನಾಡಿದರು. ಭಾವಸಾರ ಕ್ಷತ್ರಿಯ ಸಹಕಾರಿ ಪತ್ತಿನ ಸಂಘದ ಚೇರ್ಮನ್ ಶಂಕರ ಶ್ರೀಮಂತರಾವ್ ಕುಂಠೆ ಅಧ್ಯಕ್ಷತೆ ವಹಿಸಿದ್ದರು. ರಜತ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸಮಾಜದ ಸಾಧಕರು, ಮಾಜಿ ನಿರ್ದೇಶಕ ಮಂಡಳಿ ಸದಸ್ಯರು, ಗ್ರಾಹಕರನ್ನು ಸನ್ಮಾನಿಸಲಾಯಿತು.
ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುನಿತಾ ಪಾತ್ರೋಟಿ, ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾ ಮಂಡಳ ನಿರ್ದೇಶಕರಾದ ಡಾ. ಸಂಜಯ ಹೊಸಮಠ, ತಮ್ಮಣ್ಣ ಕೆಂಚರೆಡ್ಡಿ, ಉಮೇಶ ಬಾಳಿ, ಭಾವಸಾರ ಕ್ಷತ್ರಿಯ ಮಂಡಳ ಹುಬ್ಬಳ್ಳಿ ಅಧ್ಯಕ್ಷ ಪ್ರಕಾಶ ಇಜಂತಕರ, ಭಾವಸಾರ ವಿಜನ್ ಇಂಡಿಯಾ ಹುಬ್ಬಳ್ಳಿ ಫೌಂಡರ್ ನಾರಾಯಣರಾವ್ ತಾತುಸ್ಕರ್, ಎಐಬಿಕೆಎಂ ಉನ್ನತ ಅಧಿಕಾರಿ ಸಮಿತಿಯ ಕೆ.ಜಿ. ಟಿಕಾರ, ಜಗದೀಶ ಹಂಚಾಟೆ, ರಾಕೇಶ ಚುಟಕೆ, ಅರುಣ ಬೆಳಮಕರ, ಸೀಮಾ ಘಟಕೆ, ಹೇಮಾ ಸರ್ವದೆ, ಸಚಿನ್ ಚಂದಗಡಕರ, ಇತರರು ಇದ್ದರು.