ವಿಜಯಪುರ: ಭಾರತೀಯ ಸೈನಿಕರಿಗೆ ಸದಾ ಬೆನ್ನೆಲುಬಾಗಿ ನಿಲ್ಲೋಣ ಎಂದು ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಯುವ ಭಾರತ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉಗ್ರಗಾಮಿಗಳು ರಾಕ್ಷಸರಿದ್ದಂತೆ, ಮಾನವೀಯತೆ ಶತ್ರುಗಳಾಗಿರುವ ಉಗ್ರಗಾಮಿಗಳು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿರುವುದು ಅತ್ಯಂತ ನೋವಿನ ಸಂಗತಿ. ಈ ಘಟನೆಯಿಂದ ಭಾರತೀಯರು, ಅನಿವಾಸಿ ಭಾರತೀಯರು, ವಿದೇಶಿಗರು ಕಣ್ಣೀರಿಟ್ಟಿದ್ದಾರೆ. ದೇಶದ ಈ ಘಟನೆ ಅನಿವಾಸಿ ಭಾರತೀಯರನ್ನು ವಿಚಲಿತರನ್ನಾಗಿಸಿದೆ. ಭಾರತೀಯ ಸೈನಿಕರ ಜೊತೆ ನಾವು ಸದಾ ಬೆನ್ನೆಲುಬಾಗಿ ನಿಲ್ಲಬೇಕು. ಅವರಿಗಾಗಿ ತಿರಂಗಾ ಯಾತ್ರೆ ನಡೆಸುತ್ತಿರುವುದು ಅರ್ಥ ಪೂರ್ಣ ಕಾರ್ಯ ಎಂದರು.
ನಮಗೆ ದೇಶವೇ ಮೊದಲು, ದೇಶವೇ ಆದ್ಯ, ನಮ್ಮ ಸೈನಿಕರು ಧೈರ್ಯ, ಪರಾಕ್ರಮಕ್ಕೆ ಹೆಸರುವಾಸಿ. ಪ್ರತಿಭೆ ಹಾಗೂ ಧೈರ್ಯದಲ್ಲಿ ಭಾರತಕ್ಕೆ ಯಾರೂ ಸರಿಗಟ್ಟಲು ಸಾಧ್ಯವಿಲ್ಲ. ನ್ಯೂರ್ಯಾರ್ಕ್ ಸೇರಿದಂತೆ ಹಲವಾರು ಪ್ರತಿಷ್ಠಿತ ನಗರಗಳಲ್ಲಿ ವಿಶ್ವವಿದ್ಯಾಲಯ, ಕಂಪೆನಿಗಳಲ್ಲಿ ಭಾರತೀಯರ ಪಾಲು ಅಧಿಕವಾಗಿದೆ ಎಂದರು.
ಯುವ ಭಾರತ ಸಮಿತಿ ಸಂಸ್ಥಾಪಕ ಉಮೇಶ ಕಾರಜೋಳ ಮಾತನಾಡಿ, ಮನಸ್ಸು ಹಾಗೂ ಮನುಷ್ಯತ್ವವೇ ಇಲ್ಲದ ಕ್ರೂರ ಉಗ್ರಗಾಮಿಗಳು ಮುಗ್ದ ಪ್ರವಾಸಿಗರ ಜೀವ ತೆಗೆದು ವಿಕೃತಿ ಮೆರೆದಿದ್ದಾರೆ. ಇಡೀ ವಿಶ್ವವೇ ಈ ಘಟನೆಯಿಂದ ಮರುಗಿತ್ತು. ಉಗ್ರಗಾಮಿಗಳು ಸರ್ವನಾಶವಾಗಬೇಕು ಎಂಬ ಸಂದೇಶ ರವಾನಿಸಿತ್ತು. ಶೌರ್ಯ, ಪರಾಕ್ರಮಗಳಿಗೆ ಹೆಸರಾದ ನಮ್ಮ ಭಾರತೀಯ ಸೈನಿಕರು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಮಾನವೀಯತೆ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಪಾಕಿಸ್ತಾನ ಉಗ್ರಗಾಮಿಗಳನ್ನು ಪೋಷಿಸುತ್ತಿದೆ. ಉಗ್ರರು ಇಡೀ ಮಾನವೀಯತೆ ವಿರೋಧಿಗಳು, ಅವರನ್ನು ಸಂಹಾರ ಮಾಡಿರುವ ನಮ್ಮ ಹೆಮ್ಮೆಯ ಸೈನಿಕರ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಮುಖಂಡರಾದ ಶರಣಯ್ಯ ಬಂಡಾರಿಮಠ, ಬಸವರಾಜ ಯಾದವಾಡ, ಕುಮಾರ ಕಟ್ಟಿಮನಿ, ಬಸವರಾಜ ಪತ್ತಾರ, ಅನೀಲ ಧನಶ್ರೀ, ವಿರೇಶ ಗೊಬ್ಬೂರ, ಸಂತೋಷ ಝಳಕಿ, ಶಿವಪುತ್ರ ಪೊಪಡಿ, ಕಲ್ಮೇಶ ಅಮರಾವತಿ, ಪೂಜಾ ಬಾಗಿ, ಶ್ರೀಶೈಲ ಮುಳಜಿ ಮತ್ತಿತರರಿದ್ದರು. ಸಿದ್ಧೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ತಿರಂಗ ಯಾತ್ರೆ ನಡೆಯಿತು.