ಚನ್ನಪಟ್ಟಣ: ತಾಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹನುಮಾಪುರದೊಡ್ಡಿ ಮರೀಗೌಡ ಚಾರಿಟಬಲ್ ಟ್ರಸ್ಟ್ನಿಂದ ಗುರುವಾರ ಸಿಹಿ ವಿತರಿಸಲಾಯಿತು.
ನಗರದ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಿಹಿ ವಿತರಣೆ ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಉದ್ಯಮಿ ಎಚ್.ಎಂ.ನಾಗೇಶ್ ಚಾಲನೆ ನೀಡಿ, ಮಾತನಾಡಿ, ನಾವು ನೆಮ್ಮದಿ ಹಾಗೂ ನಿರ್ಭೀತಿಯಿಂದ ಜೀವನ ಸಾಗಿಸುತ್ತಿರುವುದರ ಹಿಂದೆ ಮಹನೀಯರ ತ್ಯಾಗ, ಬಲಿದಾನವಿದೆ. ದೇಶ ನನಗೇನು ಮಾಡಿದೆ ಎನ್ನುದಕ್ಕಿಂತ ನಾನು ದೇಶಕ್ಕೇನು? ಕೊಟ್ಟಿದ್ದೇವೆ ಎಂಬುದು ಮುಖ್ಯ. ಪ್ರತಿಯೊಬ್ಬರೂ ದೇಶದ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು ಎಂದ ಅವರು ತಾಲೂಕಿನ 22 ಸಾವಿರಕ್ಕೂ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮೂಲಕ ಸಿಹಿ ತಲುಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸರ್ಕಾರ ಮತ್ತು ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಾಲಕರ ಶ್ರಮಕ್ಕೆ ಗೌರವ ನೀಡಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಬೇಕು ಎಂದರು.
ತಹಸೀಲ್ದಾರ್ ಗಿರೀಶ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವ ಮೂಲಕ ಸಮಾಜಮುಖಿ ಜೀವನ ಸಾಗಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಬರಲು ಹಲವು ಮಹನೀಯರ ಬಲಿದಾನವಿದ್ದು, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಬಲಿಷ್ಠ ದೇಶ ನಿರ್ಮಾಣ ಸಾಧ್ಯ ಎಂದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ಉದ್ಯಮಿ ಮೈಲನಾಯ್ಕನ ಹೊಸಹಳ್ಳಿ ಜಗದೀಶ್, ಕ್ಷೇತ್ರ ಸಮನ್ವಯಾಧಿಕಾರಿ ಸಿ.ರಾಜಶೇಖರ್, ನಗರ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ಬಿಇಒ ರಾಮಲಿಂಗಯ್ಯ, ಸಿಡಿಪಿಒ ಪ್ರಮಿಳಾ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಂಪುರ ಮಲವೇಗೌಡ, ಮುಖಂಡರಾದ ರಾಂಪುರ ಮಲ್ಲೇಶ್, ಆರ್.ಎಂ.ಸಿ.ಸಿದ್ದಪ್ಪ, ಎಂ.ಶಿವಮಾದು, ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೇಶ್, ಉಪ ಪ್ರಾಂಶುಪಾಲ ವಸಂತಕುಮಾರ್, ಶಿಕ್ಷಕರಾದ ಶಿವಕುಮಾರ್, ಗೋವಿಂದರಾಜು, ಗೋವಿಂದಪ್ಪ, ಪುಟ್ಟಲಿಂಗಯ್ಯ, ಗಂಗಾಧರ್, ಸಂಜೀವೇ ಗೌಡ ಇದ್ದರು.