ಜಿಲ್ಲೆ

ಕಾಂಗ್ರೆಸ್ ಅಧಿಕಾರದಲ್ಲಿ ನಡೆದಿರುವ ಬಾಂಬ್​ಬ್ಲಾಸ್ ಬಗ್ಗೆ ಅರಿತುಕೊಳ್ಳಲಿ

ಹುಬ್ಬಳ್ಳಿ : ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಎಷ್ಟು ಭಯೋತ್ಪಾದನಾ ಚಟುವಟಿಕೆಗಳು ನಡೆದಿವೆ ?, ಎಲ್ಲೆಲ್ಲಿ ಬಾಂಬ್ ಬ್ಲಾಸ್ಟ್​ಗಳಾಗಿವೆ ? ಎಂಬುದನ್ನು ಆ ಪಕ್ಷದ ಮುಖಂಡರು ತಿಳಿದು ಮಾತನಾಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ಪತ್ತೆ ಹಚ್ಚುವಲ್ಲಿ ಕೇಂದ್ರದ ಏಜೆನ್ಸಿಗಳು ವಿಫಲವಾಗಿವೆ ಎಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಬೇಜವಾಬ್ದಾರಿಯುತ ಹೇಳಿಕೆ ನೀಡುವುದು ಸರಿಯಲ್ಲ. ನುಸುಳುಕೋರರು ಭಾರತದಲ್ಲಿ ನುಗ್ಗುವುದನ್ನು ತಡೆದಿದ್ದೇ ಬಿಜೆಪಿ ಸರ್ಕಾರ ಎಂದರು.

ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬೆಂಗಳೂರು, ಹೈದ್ರಾಬಾದ್, ಮುಂಬೈ ಸೇರಿದಂತೆ ಅನೇಕ ಕಡೆ ಬಾಂಬ್ ಬ್ಲಾಸ್ಟ್​ಗಳಾಗಿವೆ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಬಾಂಬ್ ಬ್ಲಾಸ್​ಗಳನ್ನು ಗೃಹ ಸಚಿವ ಡಾ. ಪರಮೇಶ್ವರ ಅವರು ನೆನಪು ಮಾಡಿಕೊಳ್ಳಬೇಕು. ನುಸುಳುಕೋರರ ಕಾರಣದಿಂದಲೇ ಬಾಂಬ್ ಬ್ಲಾಸ್​ಗಳಾಗಿವೆ ಎಂಬುದನ್ನು ಮರೆಯಬಾರದು. ಬಿಜೆಪಿ ಅಧಿಕಾರದ ಬಂದ ನಂತರವೇ ನುಸುಳುಕೋರರು ಹಾಗೂ ಬಾಂಬ್ ಬ್ಲಾಸ್ಟ್​ಗಳಿಗೆ ಕಡಿವಾಣ ಬಿದ್ದಿದೆ ಎಂದು ಹೇಳಿದರು.

ಗೃಹ ಸಚಿವ ಪರಮೇಶ್ವರ ಅವರನ್ನು ಸಜ್ಜನ ರಾಜಕಾರಣಿ, ರಾಜ್ಯದ ಬಗ್ಗೆ ಕಳಿಕಳಿ ಇರುವವರು ಎಂದುಕೊಂಡಿದ್ದೇವು. ಆದರೆ, ಅವರು ಸಹ ರಾಹುಲ್​ಗಾಂಧಿಯಂತೆ ಚಿಲ್ಲರೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಜಿ.ಟಿ. ದೇವೇಗೌಡ ಹೇಳಿಕೆಯಿಂದ ಬಿಜೆಪಿಗೆ ಏನೂ ಡ್ಯಾಮೇಜ್ ಆಗಿಲ್ಲ. ಮೊನ್ನೆಮೊನ್ನೆಯವರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಜಿ.ಟಿ. ದೇವೆಗೌಡ, ಈಗ ಏಕಾಏಕಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೆಲವರು ರಾಜಕಾರಣದಲ್ಲಿ ತಮಗೆ ಬೇಕಾದ ಸ್ಥಾನಮಾನ ಸಿಗದೇ ಇದ್ದರೆ ಪಕ್ಷದ ವಿರುದ್ಧ ಮಾತನಾಡುವ ಹಾಗೂ ಪಕ್ಷ ತೊರೆಯುವ ಕೆಲಸ ಮಾಡುತ್ತಾರೆ. ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಅದರದ್ದೇ ಆದ ವಿಚಾರಧಾರೆ ಇರುತ್ತದೆ. ಆದರೆ, ಕೆಲವರಿಗೆ ಇದ್ಯಾವುದು ಅನ್ವಯಿಸುವುದೇ ಇಲ್ಲ. ಅಂತವರು ತಮ್ಮ ಸ್ವಂತ ಅಧಿಕಾರಕ್ಕೆ ಬಡಿದಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ರಾಜ್ಯ ಸರ್ಕಾರದ ವಿರುದ್ಧ ಮುಡಾ ಮತ್ತು ವಾಲ್ಮೀಕಿ ಹಗರಣ ಕೇಳಿ ಬಂದಿವೆ. ಇಂತಹ ಸಮಯದಲ್ಲಿ ಜಿ.ಟಿ. ದೇವೇಗೌಡ ಹೇಳಿಕೆ ಸರಿಯಲ್ಲ ಎಂದರು.