ಬ್ಯಾಡಗಿ: ದೇಶಕ್ಕಾಗಿ ಪ್ರಾಣ ಒತ್ತಿಯಿಟ್ಟು ಹೋರಾಟ ನಡೆಸುತ್ತಿರುವ ಯೋಧರಿಗೆ ದೇಶದ ಪ್ರತಿಯೊಬ್ಬ ನಾಗರಿಕರೂ ಆತ್ಮಸ್ಥೈರ್ಯ ತುಂಬುವ ಮೂಲಕ ರಾಷ್ಟ್ರದ ಭದ್ರತೆ ಹಾಗೂ ಐಕ್ಯತೆಗೆ ಒಗ್ಗಟ್ಟಿನಿಂದ ಕೈಜೋಡಿಸಬೇಕಿದೆ ಎಂದು ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ ಹೇಳಿದರು.
ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ತಿರಂಗಾ ಯಾತ್ರೆಯ ಬಳಿಕ ತಹಸೀಲ್ದಾರ್ ಕಚೇರಿ ಎದುರು ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಪಾಕಿಸ್ತಾನದ ಪ್ರಚೋದನೆಯಿಂದ ಕಾಶ್ಮೀರದಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಅಮಾಯಕರ ಜೀವ ತೆಗೆದ ಭಯೋತ್ಪಾದಕರ ಪ್ರತೀಕಾರವಾಗಿ ಸೈನಿಕರು ವೀರಾವೇಶದಿಂದ ಹೋರಾಡಿ ಜಯ ಸಾಧಿಸಿದ್ದಾರೆ. ಪಾಕ್ನ ಕುತಂತ್ರ ಹಾಗೂ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಿದೆ ಎಂದರು.
ಗಡಿನಿಯಮ ಉಲ್ಲಂಘನೆ, ನಾಗರಿಕರ ಹತ್ಯೆ, ರಾಷ್ಟ್ರೀಯತೆಗೆ ಧಕ್ಕೆ ಬಂದಲ್ಲಿ ಎಂದಿಗೂ ನಾವು ಸಹಿಸಲ್ಲ, ಯಾವುದೇ ದೇಶವನ್ನು ಎದುರಿಸುವ ತಾಕತ್ತು ಭಾರತಕ್ಕಿದೆ. ಗಡಿಯಲ್ಲಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ. ಈ ನಿಟ್ಟಿನಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದೆವೆ ಎಂದರು.
ತಿರಂಗಾ ಯಾತ್ರೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು, ವಕೀಲರು, ಸಾರ್ವಜನಿಕರು ಭಾಗವಹಿಸಿದ್ದರು. ಸುಮಾರು 100 ಮೀಟರ್ ಉದ್ದದ ತಿರಂಗಾ ಹಿಡಿದು ಸಾರ್ವಜನಿಕರು ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತ ಸಾಗಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಭಾರತಿ ಜಂಬಗಿ, ಮಾಜಿ ಸೈನಿಕರಾದ ಎಂ.ಜಿ. ಬಣಕಾರ, ರಾಜಣ್ಣ ಹೊಸಳ್ಳಿ, ಪ್ರಭುಗೌಡ್ರ ಪಾಟೀಲ ಬಳ್ಳಾರಿ, ರಾಜು ಶಿಡೇನೂರ, ವಕೀಲ ಎಸ್.ಎಸ್. ಬಟ್ಟಲಕಟ್ಟಿ, ಪ್ರಕಾಶ ಬನ್ನಿಹಟ್ಟಿ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ಬಸವಣ್ಣೆಪ್ಪ ಛತ್ರದ, ಈರಣ್ಣ ಬಣಕಾರ, ಶಂಕರಗೌಡ ಪಾಟೀಲ, ಸಂಜೀವ ಮಡಿವಾಳರ, ಬಿ.ಎಂ. ಜಗಾಪುರ, ಎಂ.ಎನ್. ಕಂಬಳಿ, ಮಂಜುನಾಥ ಉಪ್ಪಾರ, ಪಾಂಡು ಸುತಾರ, ಪ್ರದೀಪ ಜಾಧವ, ಪದ್ಮಾವತಿ ಯೋಗಿ, ಸರೋಜ ಉಳ್ಳಾಗಡ್ಡಿ, ವಿಜಯಭರತ ಬಳ್ಳಾರಿ ಇತರರಿದ್ದರು.