ಕಮತಗಿ ಸಮೀಪದ ಮುಳ್ಳೂರ ಗ್ರಾಮದಲ್ಲಿ ಭಾನುವಾರ ಶ್ರೀ ರಾಮದೇವರ ಜಾತ್ರಾ ಮಹೋತ್ಸವದಲ್ಲಿ ರಾಮನ ಭಾವಚಿತ್ರ ಮೆರವಣಿಗೆ ಸಂಭ್ರಮದಿಂದ ಜರುಗಿತು. 
ಜಿಲ್ಲೆ

ರಾಮನ ಆದರ್ಶಗಳನ್ನು ಪಾಲಿಸೋಣ

ಕಮತಗಿ: ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯದ ವ್ರತಧಾರಿಯಾಗಿದ್ದ ಶ್ರೀರಾಮನ ಆದರ್ಶಗಳನ್ನು ನಾವೆಲ್ಲ ಪಾಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.

ಸಮೀಪದ ಮುಳ್ಳೂರು ಗ್ರಾಮದಲ್ಲಿ ಹಿಂದು ಕ್ಷತ್ರಿಯ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀ ರಾಮದೇವರ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿ ಇಂದಿಗೆ ಒಂದು ವರ್ಷವಾಯಿತು. ರಾಮನ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಓದಿಕೊಂಡು ಬದುಕಿಗೆ ಅಳವಡಿಸಿಕೊಳ್ಳಬೇಕು. ತನ್ನ ಬಳಿ ಬರುವ ಎಲ್ಲರನ್ನು ಅಪ್ಪಿಕೊಂಡು ಅವರಿಗೆ ಎದುರಾಗುವ ಸಮಸ್ಯೆ ಪರಿಹರಿಸುವಂತ ಶಕ್ತಿ ಶ್ರೀರಾಮ ಹೊಂದಿದ್ದಾನೆ ಎಂದರು.

ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀರಾಮಪ್ರಭುವಿನ ಶ್ರೇಷ್ಠ ಗುಣಗಳು ನಮ್ಮ ಬದುಕಿನಲ್ಲಿ ಅಳವಡಿತಗೊಂಡು ನಮ್ಮ ಬದುಕು ಭವ್ಯವಾಗಲಿ, ರಾಮರಾಜ್ಯ ಪುನಃ ನಿರ್ಮಾಣವಾಗಲಿ. ಮನುಷ್ಯನಾಗಿದ್ದುಕೊಂಡು ದೇವರ ಸ್ವರೂಪ ಪಡೆದ ಕೀರ್ತಿ ರಾಮನಿಗೆ ಸಲ್ಲುತ್ತದೆ. ವಿನಯತೆ, ಧನ್ಯತೆ ಭಾವನೆ ಹೊಂದಿದ ಸೀತೆ ನಮಗೆ ಆದರ್ಶವಾಗಿದ್ದಾರೆ ಎಂದರು.

ಕ್ಷತ್ರಿಯ ಸಮಾಜದ ಮುಖಂಡ ಯುವರಾಜ ದೇಸಾಯಿ, ಬಾಗಲಕೋಟೆ-ವಿಜಯಪುರ ಹಾಲು ಒಕ್ಕೂಟದ ನಿರ್ದೇಶಕ ಸಂಗಣ್ಣ ಹಂಡಿ, ಪಿಎಸ್‌ಐ ಜೋತಿ ವಾಲಿಕಾರ, ಲಕ್ಷ್ಮಣಗೌಡ ಗೌಡರ, ಬಸವರಾಜ ಚೌಧರಿ, ಶಿವಾನಂದ ಪೂಜಾರಿ, ಗ್ರಾಪಂ ಮಾಜಿ ಅಧ್ಯಕ್ಷ ಮುದ್ದಪ್ಪ ಕೊಳಮಲಿ, ಬಸವನಗೌಡ ಗೌಡರ, ಯಮನಪ್ಪ ಕೊಪ್ಪದ, ಪಿಕೆಪಿಎಸ್ ಸದಸ್ಯ ತಿಪ್ಪಣ್ಣ ಗೌಡರ ಮತ್ತಿತರರಿದ್ದರು.

ಗ್ರಾಮದಲ್ಲಿ ಶ್ರೀ ರಾಮದೇವರ ಭಾವಚಿತ್ರದ ಮೆರವಣಿಗೆ ಸಡಗರ-ಸಂಭ್ರಮದಿಂದ ಜರುಗಿತು. ಮಹಿಳೆಯರು ಕಳಸಾರತಿಯೊಂದಿಗೆ ಭಾಗವಹಿಸಿದರು.