ಕಂಪ್ಲಿ: ಮಡಿವಾಳ ಮಾಚಿದೇವರ ತತ್ವದಂತೆ ಏಕದೇವೋಪಾಸನೆ ಪದ್ಧತಿ ಅನುಸರಿಸಬೇಕು ಎಂದು ಇಲ್ಲಿನ ಕಲ್ಮಠದ ಶ್ರೀ ಅಭಿನವ ಪ್ರಭುಸ್ವಾಮೀಜಿ ಹೇಳಿದರು.
ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಅಡಳಿತ ಹಮ್ಮಿಕೊಂಡಿದ್ದ ಶರಣ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ, ಸದಾಚಾರ ಸಂಪನ್ನತೆ ರೂಢಿಸುವಲ್ಲಿ ಪೋಷಕರು ಜಾಗೃತರಾಗಬೇಕು ಎಂದರು.
ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಮಡಿವಾಳರ ಹುಲುಗಪ್ಪ ಮಾತನಾಡಿ, ಮಡಿವಾಳರನ್ನು ಎಸ್ಸಿಗೆ ಸೇರಿಸಬೇಕು. ಪಟ್ಟಣದ ಮಡಿವಾಳರ ಓಣಿಯಲ್ಲಿ ಮೂಲಸೌಕರ್ಯ, ಮಡಿವಾಳ ಸಮುದಾಯದ 75ಕುಟುಂಬಗಳಿಗೆ ನಿವೇಶನ ವಿತರಿಸಿ ಮನೆ ನಿರ್ಮಿಸಿಕೊಡಬೇಕು. ಮಡಿವಾಳ ಉದ್ಯೋಗಕ್ಕೆ ಧೋಬಿಘಾಟ್, ಸಲಕರಣೆ, ಜೀವರಕ್ಷಕಗಳನ್ನು ಒದಗಿಸಬೇಕು. ಮಾಚಿದೇವ ದೇವಸ್ಥಾನಕ್ಕೆ ಆವರಣಗೋಡೆ ನಿರ್ಮಿಸಬೇಕು. ಮಡಿವಾಳ ಸಮುದಾಯಭವನಕ್ಕೆ 5ಲಕ್ಷ ರೂ. ಮಂಜೂರಾಗಿದ್ದು, ಇನ್ನು 15ಲಕ್ಷ ರೂ. ಮಂಜೂರುಗೊಳಿಸುವಲ್ಲಿ ಶಾಸಕರು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಎ.ರಾಜ, ಎಂ.ರಾಜೇಶ, ಎಲ್‌ಐಸಿ ಈರಣ್ಣ, ರಮೇಶ, ಎಂ.ವಿರೂಪಾಕ್ಷಿ, ಎಂ.ಗಂಗಪ್ಪ, ಎಂ.ರಾಘವೇಂದ್ರ, ಎಂ.ಯಮನೂರಪ್ಪ, ಎಂ.ನಾರಾಯಣಸ್ವಾಮಿ, ಪ್ರಮುಖ ಕೆ.ಮನೋಹರ ಇತರರಿದ್ದರು.