ಹಂಸಭಾವಿ: 12ನೇ ಶತಮಾನವೆಂದರೆ ಕ್ರಾಂತಿ, ಶಾಂತಿ ಮತ್ತು ಸಮಾನತೆಯ ಚಳವಳಿಯ ಕಾಲ ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ಶಿವಯೋಗಿ ಕೆರೂಡಿ ಹೇಳಿದರು.
ಸ್ಥಳೀಯ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಚನ ಶ್ರಾವಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶರಣರು ನಡೆದು ನಂಬಿರುವ ಮೊದಲ ತತ್ವವೇ ಕಾಯಕವೇ ಕೈಲಾಸ. ಕಾಯಕದಿಂದ ಬಂದಿರುವುದನ್ನು ಸಮಾಜದ ಉದ್ಧಾರಕ್ಕೆ ಬಳಕೆ ಮಾಡುವ ಉದಾತ್ತ ಗುಣವನ್ನು ಶರಣರು ಜಾರಿಗೆ ತಂದರು. ಶರಣರು ತೋರಿಸಿದ ದಾರಿಯಲ್ಲಿ ನಾವು ಮುನ್ನಡೆಯಬೇಕು ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಆರ್. ಕೆಂಚಕ್ಕನವರ ಮಾತನಾಡಿ, ಬಸವ ಧರ್ಮದ ಮೂಲತತ್ವ ದಯೆ. ಸಕಲ ಜೀವರಾಶಿಗಳಲ್ಲಿ ನಾವು ದಯೆ ಹೊಂದಿರಬೇಕು .ಹುಟ್ಟಿನಿಂದ ವ್ಯಕ್ತಿ ದೊಡ್ಡವನಾಗಲಾರ. ಜ್ಞಾನ ಮತ್ತು ಸಾಧನೆಗಳು ಅವನ ಶ್ರೇಷ್ಠತೆಯನ್ನು ಹೆಚ್ಚಿಸುತ್ತವೆ. ಶರಣರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ, ಕೆಳಸ್ತರದ ದೀನ ದುರ್ಬಲರ ಧ್ವನಿಯಾಗಿ ಬಾಳಿದವರು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹುಚಗೊಂಡ್ರ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಗ್ರಂಥಪಾಲಕ ಬಸವರಾಜ ಕೊಳ್ಳಿ, ಬಸವರಾಜ ಮಲ್ಲಜ್ಜೇರ, ಎಲ್.ಎಚ್. ಪಾಟೀಲ, ಸಂದೀಪ ಬಾಸೂರ, ಗ್ರಾ.ಪಂ. ಸದಸ್ಯ ಸುರೇಶ ಕರ್ಜಗಿ, ಮಾಜಿ ಅಧ್ಯಕ್ಷೆ ಸಂಗೀತಾ ಹರಿಜನ, ಲಲಿತಾ ವಾಲಿ, ಶಿಲ್ಪಾ ಕೊಳ್ಳಿ, ರತ್ನಮ್ಮಾ ಎಲಿ, ನಿರ್ಮಲಾ ಇಟಗಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ನವ್ಯಾ ಕರ್ಜಗಿ ಪ್ರಾರ್ಥಿಸಿದರು. ಶಿವಯೋಗಿ ಹುಚಗೊಂಡ್ರ ನಿರೂಪಿಸಿದರು.