ಕಂಪ್ಲಿ: ಒತ್ತಡ ಜೀವನದಿಂದ ಮುಕ್ತರಾಗಲು ರಾಜಯೋಗ ಶಿಕ್ಷಣ ಪಡೆಯಬೇಕು ಎಂದು ಧಾರವಾಡದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ ಹೇಳಿದರು.
ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ಮಾತೇಶ್ವರಿ ಜಗದಂಬ ಸರಸ್ವತಿ ಸ್ಮತಿ ದಿನ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.
ಶಾಂತಿ, ಸಂಯಮ, ತಾಳ್ಮೆ, ಉತ್ತಮ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಲು ನಿತ್ಯ ಈಶ್ವರೀಯ ವಿವಿಯ ಪಾಠಗಳಲ್ಲಿ ಪಾಲ್ಗೊಳ್ಳಬೇಕು. ಕೌಟುಂಬಿಕ ಸಾಮರಸ್ಯ ಸಾಧಿಸಲು ತಾಳ್ಮೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಬ್ರ.ಕು.ಸಕಲೇಶ್ವರಿ ಅಕ್ಕ ಮಾತನಾಡಿ, ಈಶ್ವರೀಯ ವಿವಿಯ ಮೊದಲ ಆಡಳಿತಗಾರ್ತಿಯಾದ ಮಾತೇಶ್ವರಿ ಜಗದಂಬ ಸರಸ್ವತಿಯವರ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡಲ್ಲಿ ಸುಖಿಜೀವನ ಸಾಗಿಸಲು ಸಾಧ್ಯವಾಗಲಿದೆ. ಭಾರತಿ ಸಂಗೀತ ವಿದ್ಯಾಲಯದ ಗಾಯಕ ಚಿನ್ಮಯ ಜೆ.ಪಿ.ಶಾಸ್ತ್ರಿ ಬಾಬಾರ ಗೀತೆಗಳನ್ನು ಹಾಡಿದರು. ಲೇಖಕ ಬಂಗಿ ದೊಡ್ಡ ಮಂಜುನಾಥ, ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಸಾಧಕರಾದ ರಾಮಣ್ಣ, ಅಚ್ಚಪ್ಪ ಶರಣಪ್ಪ, ಯಂಕಪ್ಪ, ಸರಸ್ವತಿ ಜೆ.ಪಿ.ಶಾಸ್ತ್ರಿ, ಸುಮಂಗಳಾ ವೆಂಕಟಸ್ವಾಮಿರೆಡ್ಡಿ, ಪ್ರಕಾಶ, ಸುಧಾಕರ ಇತರರಿದ್ದರು.