ಜಿಲ್ಲೆ

ಬಸವಣ್ಣನ ಕಾಯಕ ತತ್ತ್ವ ಅಳವಡಿಸಿಕೊಳ್ಳಲಿ

ರಾಘವೇಂದ್ರಗೌಡ ಭೀ ಪಾಟೀಲ್

ಇಟಗಿ: ಬಸವಣ್ಣನ ಕಾಯಕ, ದಾಸೋಹ ಹಾಗೂ ಮಾನವೀಯ ತತ್ತ್ವಗಳು ಎಲ್ಲರಿಗೂ ಅನ್ವಯವಾಗುತ್ತವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನೈಜ ಅರ್ಥದಲ್ಲಿ ಬಸವಣ್ಣನ ಅನುಯಾಯಿಯಾಗುತ್ತೇವೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಸಮೀಪದ ಅವರೊಳ್ಳಿ-ಬಿಳಕಿ ಗ್ರಾಮದಲ್ಲಿ ಮಂಗಳವಾರ ಗ್ರಾಮದೇವಿಯರ ಜಾತ್ರಾ ಮಹೋತ್ಸವದ 2ನೇ ದಿನ ಹಮ್ಮಿಕೊಂಡಿದ್ದ ಬಸವಣ್ಣನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ಬಸವಾದಿ ಶರಣರು ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಬಯಸಿದ ಮಹಾ ಮಾನವತಾವಾದಿಗಳು ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಮೋದ ಕೊಚೇರಿ ಮಾತನಾಡಿ, ಅವರೊಳ್ಳಿ-ಬಿಳಕಿ ಗ್ರಾಮದ ಜನತೆ ಬಸವಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪಿಸುವ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆ ಎತ್ತಿ ಹಿಡಿದಿದ್ದಾರೆ ಎಂದರು. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿವೇಕಾನಂದ ಭರಮಪ್ಪನವರ ಮಾತನಾಡಿದರು.

ಗ್ರಾಮದೇವತೆಯರಿಗೆ ವಿಶೇಷ ಪೂಜೆ, ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಸಕಲ ವಾಧ್ಯಮೇಳಗಳೊಂದಿಗೆ ನಡೆದ ಹೊನ್ನಾಟದಲ್ಲಿ ಅವರೊಳ್ಳಿ-ಬಿಳಕಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತರು ಭಂಡಾರದಲ್ಲಿ ಮಿಂದೆದ್ದರು. ರುದ್ರಸ್ವಾಮಿ ಮಠದ ಚನ್ನಬಸವ ದೇವರು, ಅಶೋಕ ಕೊಡೊಳ್ಳಿ, ಮಾರುತಿ ಟಕ್ಕೆಕರ, ಪಂಡಿತ ಓಗಲೆ, ಯಶವಂತ ಕೊಡೊಳ್ಳಿ, ರಾಜುಗೌಡ ಪಾಟೀಲ, ರುದ್ರಪ್ಪ ಶಿವಪ್ಪನವರ, ಶಿವಾನಂದ ಕೊಡೊಳ್ಳಿ, ಮಂಜುನಾಥ ಕೊಳೇಕರ, ವಿಠ್ಠಲ ದೇಶನೂರ, ರುದ್ರಪ್ಪ ಚವಲಗಿ, ನಾಗೇಂದ್ರ ಚೌಗಲಾ ಹಾಗೂ ಇತರರು ಇದ್ದರು.