ಮೈಸೂರು: ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಯಾವುದೆ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವವರ ಮೇಲಿನ ಜವಾಬ್ದಾರಿ ಕಿಂಚಿತ್ತೂ ಕಡಿಮೆಯಾಗದೆ ಸದಾ ಜಾಗೃತರಾಗಿಬೇಕು ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಅಭಿಪ್ರಾಯಪಟ್ಟರು.
ಅಶೋಕಪುರಂ ಅಭಿಮಾನಿಗಳ ಬಳಗ, ಕರ್ನಾಟಕ ದಲಿತ ವೆಲ್‌ಫೇರ್ ಟ್ರಸ್ಟ್ ಹಾಗೂ ವಿಶ್ವಮೈತ್ರಿ ಬುದ್ಧ ವಿಹಾರದ ಸಹಯೋಗದಲ್ಲಿ ನಗರದ ಬುದ್ಧ ವಿಹಾರದಲ್ಲಿ ಮಂಗಳವಾರ ಆಯೋಜಿಸಿದ್ದ ‘2024ರ ಚುನಾವಣೋತ್ತರ ಭಾರತ’ ಕುರಿತು ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2024 ಚುನಾವಣೆ ಫಲಿತಾಂಶದ ಬಳಿಕ ದೇಶದಲ್ಲಿ ಇಂಡಿಯಾ ಒಕ್ಕೂಟ ಅಥವಾ ಎನ್‌ಡಿಎ ಒಕ್ಕೂಟವೇ ಅಧಿಕಾರಕ್ಕೆ ಬಂದರೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವವರ ಮೇಲಿನ ಜವಾಬ್ದಾರಿ ಕಿಂಚಿತ್ತೂ ಕಡೆಮೆಯಾಗುವುದಿಲ್ಲ. ದೇಶದ ಜನರು ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸದಾ ಜಾಗೃತವಾಗಿರಬೇಕಾದ ಅಗತ್ಯವಿದೆ ಎಂದರು.
ಒಂದು ವೇಳೆ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಭ್ರಮನಿರಸನಗೊಳ್ಳುವ ಬಿಜೆಪಿ ಮತ್ತು ಸಂಘಪರಿವಾರ ಇಂಡಿಯಾ ಒಕ್ಕೂಟಕ್ಕೆ ಆಡಳಿತ ನಡೆಸಲು ಅವಕಾಶ ಕೊಡುವುದಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸಲು ಸಕಲೆಂಟು ತಂತ್ರ-ಕುತಂತ್ರಗಳನ್ನು ನಡೆಸುತ್ತದೆ. ಈಗಾಗಲೇ ಸಂವಿಧಾನದ ನಾಶಕ್ಕೆ ಕೈ ಹಾಕಿದ್ದ ಬಿಜೆಪಿ ಒಂದು ವೇಳೆ ಈ ಚುನಾವಣೆಯಲ್ಲಿ ಸರಳ ಬಹುಮತದ ಮೂಲಕ ಅಧಿಕಾರಕ್ಕೆ ಬಂದರೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ತೆಗೆದುಹಾಕಿ ಮತ್ತೆ ಮನುಸ್ಮತಿ ಆಧಾರಿತ ಅಸಮಾನತೆ ಮತ್ತು ಅನ್ಯಾಯದ ಆಡಳಿತವನ್ನು ಜಾರಿಗೆ ತರುತ್ತಾರೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರವನ್ನು ಕಡಿಮೆ ಮಾಡಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಪುಲ್ವಾಮ ದಾಳಿಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಅಧಿಕಾರಕ್ಕೆ ಬಂದರು. ಈ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯ ರಾಮಮಂದಿರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರು ಎಂದು ದೂರಿದರು.
ಬಿಜೆಪಿ, ಗೆದ್ದರೂ ಸೋತರೂ ಮೋದಿ ಹವಾ ಈಗ ಕಡಿಮೆಯಾಗಿದೆ. ಆದ್ದರಿಂದಲೇ ಅವರು ಚುನಾವಣಾ ಭಾಷಣಗಳಲ್ಲಿ ಪ್ರಚೋಧನಾಕಾರಿಯಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಚುನಾವಣಾ ಆಯೋಗ ಯಾವುದೇ ಕ್ರಮಕೈಗೊಂಡಿಲ್ಲ. ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ ಈ ಚುನಾವಣೆಯಲ್ಲಿ ಗೆಲ್ಲುವ ಪ್ರಚಾರ, ಶಕ್ತಿ, ಪ್ರಭಾವ ಇತ್ತೇ ಎಂಬುದು ಚುನಾವಣೆಯ ನಂತರ ತಿಳಿಯುತ್ತದೆ ಎಂದರು.
ವಿಧಾನ ಸಭೆ ಅದಿವೇಶನದಲ್ಲಿ ಬಿಜೆಪಿ ಶಾಸಕರು ಜೈ ಶ್ರೀರಾಮ್ ಎಂದು ಕೂಗಿದರು. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ‘ಜೈ ಸೀತಾರಾಮ್’ ಎಂದು ಕೂಗಿದರು. ಆದರೆ ನಿಜವಾಗಿ ‘ಜೈ ಸಂವಿಧಾನ್’ ಎಂದು ಘೊಷಣೆ ಮೊಳಗಿಸಬೇಕಿತ್ತು. ಸಂವಿಧಾನ ಕಾಪಾಡುವ ಸ್ಥಾನದಲ್ಲಿ ಕುಳಿತು ಜೈ ಸೀತಾರಾಮ್ ಎನ್ನುವುದು ಸರಿಯಲ್ಲ. ಮೋದಿ ಕಾವಿ ಬಟ್ಟೆ ಹಾಕಿಕೊಂಡು ಅಯೋಧ್ಯೆಯಲ್ಲಿ ಪೂಜೆ ಮಾಡಿದರೆ, ಸಿದ್ದರಾಮಯ್ಯ ಬಿಳಿ ಬಟ್ಟೆ ತೊಟ್ಟು ಪೂಜೆ ಮಾಡುತ್ತಾರೆ ಎಂದು ವಿಷಾಧಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಸದಸ್ಯ ಕೆ.ಎನ್.ಲಿಂಗಪ್ಪ ಮಾತನಾಡಿ, ಜವಾಹರ್‌ಲಾಲ್ ನೆಹರು ಸಾಕಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಆದರೆ, ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ಒಂದು ಸಾರ್ವಜನಿಕ ಸಂಸ್ಥೆಯನ್ನೂ ಸ್ಥಾಪಿಸದ ನರೇಂದ್ರ ಮೋದಿ ಬಹುತೇಕ ಸಾರ್ವಜನಿಕ ಸಂಸ್ಥೆಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿದರು ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ, ಅವುಗಳನ್ನು ಭರ್ತಿಮಾಡಲಿಲ್ಲ. ಹಸಿ ಸುಳ್ಳುಗಳನ್ನು ಹೇಳುವುದನ್ನು ಬಿಟ್ಟು ನರೇಂದ್ರಮೋದಿ ಯಾವ ಕೆಲಸವನ್ನೂ ಮಾಡಿಲ್ಲ. ಯುವ ಜನತೆ ಈಗ ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಯುವ ಜನತೆ ಇತ್ತ ಚಿಂತಿಸುವ ಅಗತ್ಯವಿದೆ ಎಂದರು.
ಸಂವಾದಲ್ಲಿ ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ಮೆಸ್ಕೋ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ. ಶಬೀರ್ ಮುಸ್ತಫಾ, ಸಾಹಿತಿ ಸಿದ್ದಸ್ವಾಮಿ, ದಲಿತ ವೆಲ್ಛೇರ್ ಟ್ರಸ್ಟ್ ಗೌರವಾಧ್ಯಕ್ಷ ಪ್ರೊ.ಟಿ.ಎಂ. ಮಹೇಶ್ ಇತರರು ಇದ್ದರು.