ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಅಧಿಕಾರಿಗಳೊಂದಿಗೆ ಉಸ್ತುವಾರಿ ಸಚಿವ ಬೋಸರಾಜು ಸಭೆ ನಡೆಸಿದರು. ಎ.ಎಸ್.ಪೊನ್ನಣ್ಣ, ಧರ್ಮಜ ಉತ್ತಪ್ಪ, ಜಾನ್ಸನ್, ಪ್ರಶಾಂತ್ ಇದ್ದರು. 
ಜಿಲ್ಲೆ

ಕುಡಿಯುವ ನೀರಿನ ಸಮಸ್ಯೆ ಉಂಟಾಗದಿರಲಿ

ನಾಗೇಶ ಎಸ್

ವಿರಾಜಪೇಟೆ: ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರ ವಹಿಸಬೇಕು. ಸಕಾಲಕ್ಕೆ ಕುಡಿಯುವ ನೀರನ್ನು ಪೂರೈಸಬೇಕು. ಸಾರ್ವಜನಿಕರಿಂದ ದೂರು ಬರದಂತೆ ಎಚ್ಚರವಹಿಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಸೂಚಿಸಿದರು.

ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ಬುಧವಾರ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕುಗಳ ಅಧಿಕಾರಿಗಳೊಂದಿಗೆ ಪ್ರಸಕ್ತ ಆರ್ಥಿಕ ವರ್ಷದ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಮಾತನಾಡಿದ ಅವರು, ತಹಸೀಲ್ದಾರರು ಮತ್ತು ಇಒಗಳು ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ ವಿಶೇಷ ಗಮನಹರಿಸಬೇಕು. ಜತೆಗೆ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ ನೀಡಿ, ಕುಂದುಕೊರತೆ ಆಲಿಸಬೇಕು ಎಂದು ನಿರ್ದೇಶನ ನೀಡಿದರು.

ನಾಗರಹೊಳೆಯಲ್ಲಿನ ಗಿರಿಜನ ಆಶ್ರಮ ಶಾಲೆಯಲ್ಲಿ ಮೂಲ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ಸರ್ಕಾರ ಹಲವು ಯೋಜನಾ ಕಾರ್ಯಕ್ರಮಗಳು ಜಾರಿಗೊಳಿಸಿದ್ದರೂ ಪರಿಪೂರ್ಣವಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಲ್ಲಿ ಸರ್ಕಾರದ ಗಮನಕ್ಕೆ ತರಬಹುದಾಗಿದೆ. ಯಾವುದೇ ಮಾಹಿತಿ ನೀಡದಿದ್ದಲ್ಲಿ ಸಮಸ್ಯೆ ಬಗೆ ಹರಿಸುವುದಾದರೂ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಬೇಕು. ಸರ್ಕಾರ ಸಾಕಷ್ಟು ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳನ್ನು ಆರಂಭಿಸಿದ್ದು, ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದವರಿಗೆ ಅವಕಾಶ ಮಾಡಬೇಕು. ಕೊರತೆಗಳಿದ್ದಲ್ಲಿ ಗಮನಕ್ಕೆ ತರುವಂತಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕಾಳಜಿ ವಹಿಸಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ರಸ್ತೆ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆ ನಿಟ್ಟಿನಲ್ಲಿ ರಸ್ತೆ ಸುಧಾರಿಸಬೇಕು. ರಸ್ತೆಗಳ ನಿರ್ವಹಣೆಗೆ ಸರ್ಕಾರ ಹಣ ನೀಡಿದ್ದು, ಸರಿಯಾಗಿ ಬಳಸಬೇಕು. ಎಲ್ಲ ಇಲಾಖೆಗಳಲ್ಲಿ ಶೇ.91 ರಿಂದ ಶೇ.95 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವರದಿ ನೀಡಲಾಗಿದೆ. ಆದರೆ ಕೆಲವು ಕಡೆ ಸಮಸ್ಯೆಗಳು ಇತ್ಯರ್ಥವಾಗದೆ ಹಾಗೆ ಉಳಿದುಬಿಟ್ಟಿವೆ. ಸ್ಥಳೀಯ ಮಟ್ಟದಲ್ಲಿಯೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಮುಂದಿನ ವಾರದಲ್ಲಿ ತಾಲೂಕುವಾರು ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೆಡಿಪಿ ಸಭೆ ನಡೆಸಲಾಗುವುದು. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಆಗಬೇಕು. ವಿರಾಜಪೇಟೆ ಮತ್ತು ಗೋಣಿಕೊಪ್ಪದಲ್ಲಿ ಸಂಚಾರ ನಿಯಂತ್ರಣ ಸಂಬಂಧ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡದೆ ಮೂಲಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ತಕರಾರು ತೆಗೆಯಬಾರದು. ಸಾರ್ವಜನಿಕ ಕೆಲಸಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕೆಂದರು.

ನಂತರ ವಿವಿಧ ಇಲಾಖೆಯ ಅಧಿಕಾರಿಗಳಿಂದ ಕಾಮಗಾರಿ ಹಾಗೂ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪೊನ್ನಂಪೇಟೆ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ವಿರಾಜಪೇಟೆ ಅಧ್ಯಕ್ಷ ಜಾನ್ಸನ್, ತಹಸೀಲ್ದಾರರು, ಇಒಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.