ಜಿಲ್ಲೆ

ಮುಟ್ಟಿನ ಕಪ್ ಕುರಿತು ಜಾಗೃತಿ ಹೆಚ್ಚಾಗಲಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಋತುಚಕ್ರದ ಸಮಯದಲ್ಲಿ ಮಹಿಳೆಯರು ಬಳಸುವ ಮುಟ್ಟಿನ ಕಪ್ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.


ಶಿರಸಿಯ ಸುಖಿತ್ವಂ ಕೇರ್ ಪ್ರೈ.ಲಿ.ನ ‘ಕಾಂಫಿ ಕಪ್’ 4ನೇ ವಾರ್ಷಿಕೋತ್ಸವ, ಮೈಸೂರು ಶಾಖೆಯ ಶುಭಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು

.
ಹಿಂದೆ ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಬಟ್ಟೆ ಬಳಕೆ ಮಾಡುತ್ತಿದ್ದರು. ಬಳಿಕ ಪ್ಯಾಡ್ ಉಪಯೋಗಿಸುತ್ತಿದ್ದರು. ಇದೀಗ ಮುಟ್ಟಿನ ಕಪ್ ಬಳಕೆ ಪ್ರಚಲಿತವಾಗುತ್ತಿದೆ. ಆದರೆ, ಈ ಕುರಿತು ಬಹಳಷ್ಟು ಮಹಿಳೆಯರಿಗೆ ಅರಿವು ಇಲ್ಲ. ಮುಟ್ಟಿನ ಕಪ್ ಬಳಕೆಯಿಂದ ಮಹಿಳೆಯರಿಗೆ ಅನೇಕ ಅನುಕೂಲಗಳಿವೆ ಎಂದರು.


ಮಹಿಳಾ ಉದ್ದಿಮೆಗಾರ್ತಿಯರ ಸಂಖ್ಯೆ ಕಡಿಮೆ ಇದೆ. ಸ್ತ್ರೀಯರು ಈ ಕ್ಷೇತ್ರಕ್ಕೆ ಬರಬೇಕು. ಯಶಸ್ವಿ ಉದ್ದಿಮೆಯಾಗಿ ಹೊರಹೊಮ್ಮಬೇಕು. ಇದರಿಂದ ವನಿತೆಯರು ಸಹ ಆರ್ಥಿಕವಾಗಿ ಸಶಕ್ತವಾಗಿ ಸ್ವಾವಲಂಬಿಯಾಗಿ ಬದುಕಬೇಕು ಎಂದರು.


ಮೈಸೂರಿನಲ್ಲಿ ಕೈಗಾರಿಕೆಗಳು ಇರಲಿಲ್ಲ. ಇರುವ ಕೆಲ ಉದ್ಯಮಗಳೂ ಮುಚ್ಚಿದ್ದವು. ಉದ್ಯಮ ಬೆಳವಣಿಗೆ ನಾನು ಸಂಸದನಾಗಿದ್ದಾಗ ಅನೇಕ ಕೆಲಸಗಳನ್ನು ಮಾಡಿ ಅನುಕೂಲ ಮಾಡಿಕೊಟ್ಟಿದ್ದೇನೆ ಎಂದರು.


ಸ್ತ್ರೀರೋಗ ತಜ್ಞೆ ಡಾ.ಶ್ವೇತಾ ನಾಯಕ್ ಮಾತನಾಡಿ, ಋತುಚಕ್ರದ ಸಮಯದಲ್ಲಿ ಬಳಕೆಯಾಗುವ ಪ್ಯಾಡ್‌ಗಳು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ. ವರ್ಷಕ್ಕೆ 1.84 ಟನ್ ಪ್ಯಾಡ್‌ಗಳು ಕಸವಾಗಿ ಭೂಮಿಗೆ ಸೇರುತ್ತಿವೆ. ಇದು ಕೊಳೆತು ಮಣ್ಣಿನ ಸೇರಿಕೊಳ್ಳಲು ಅಂದಾಜು 1 ಸಾವಿರ ವರ್ಷ ಬೇಕಾಗುತ್ತದೆ. ಇದು ಸಹ ಪ್ಲಾಸ್ಟಿಕ್‌ನಂತಹ ಸಮಸ್ಯಾತ್ಮಕ ಕಸದಂತಾಗಿದೆ. ಆದ್ದರಿಂದ ಪ್ಯಾಡ್ ಬದಲಿಗೆ ಮುಟ್ಟಿನ ಕಪ್ ಬಳಕೆ ಕುರಿತು ಪ್ರತಿ ಮನೆಯಲ್ಲೂ ಜಾಗೃತಿ ಮೂಡಬೇಕಿದೆ ಎಂದರು.


ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಸೋಂಕು, ಇದಕ್ಕೆ ಸಂಬಂಧಿಸಿದ ಕಾಯಿಲೆ ತಡೆಗೆ ಮುಟ್ಟಿನ ಕಪ್ ಬಳಕೆ ಉಪಯುಕ್ತವಾಗಿದೆ. ಆದ್ದರಿಂದ ಈ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.


ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ಮಾತನಾಡಿ, ಬೆಂಗಳೂರಿನ ಬಳಿಕ ಮೈಸೂರಿನಲ್ಲಿ ಕೈಗಾರಿಕೆ ಕ್ಷೇತ್ರ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಇದಕ್ಕೆ ಉಜ್ವಲ ಭವಿಷ್ಯ ಇದೆ ಎಂದರು.

ಸಂಸ್ಥೆ ಸಂಸ್ಥಾಪಕಿ ದಿವ್ಯಾ ಗೋಕರ್ಣ, ಕೈಗಾರಿಕೆ ಸಲಹೆಗಾರ ಮುಕೇಶ್ ಇತರರಿದ್ದರು