ಮೈಸೂರು: ಜೀವನವನ್ನು ಕಟ್ಟಿಕೊಳ್ಳಲು ಬೇಕು ಜ್ಞಾನ. ಅದನ್ನು ಅನುಭವಿಸಲು ಬೇಕು ವಿಜ್ಞಾನ ಮತ್ತು ಅದನ್ನು ಆನಂದಿಸಲು ಬೇಕು ಸುಜ್ಞಾನ ಎಂದು ಮೈಸೂರು ವಿಶ್ವವಿದ್ಯಾಲಯ ಗಣವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ಬಣ್ಣಿಸಿದರು.
ಶರಣ ಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಮನೆ ಮನೆಗೆ ಶ್ರಾವಣ ಮಾಸದ ಶರಣ ಸಂದೇಶ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ಬಳಿಕ ಬದುಕಾಗಲು ಆತ್ಮಜ್ಞಾನ ಬೇಕು. ಮರಣದ ನಂತರವೂ ನಾವು ಜೀವಂತ ಆಗಿರುವುದೇ ಆತ್ಮಜ್ಞಾನವಾಗಿದೆ ಎಂದರು.
ಮಂಗನಿಂದ ಮಾನವ ಎಂಬುದು ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ವಿಕಾಸವಾದ ಸಿದ್ಧಾಂತ. ಅನಾಗರಿಕತೆಯಿಂದ ಆಧುನಿಕ ನಾಗರಿಕತೆಯಲ್ಲಿ ಮಾನವರು ಇನ್ನೂ ಮನುಷ್ಯತ್ವವನ್ನೇ ಬೆಳೆಸಿಕೊಳ್ಳಲಿಲ್ಲ. ಈಗಲಾದರೂ ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರು ತೃಪ್ತಿಗಿಂತ ಆತ್ಮತೃಪ್ತಿ ಪಡೆದುಕೊಳ್ಳಬೇಕು ಎಂದರು.
ಸಾಹಿತ್ಯ ಕೃತಿ ಓದಬೇಕು. ಅದರಲ್ಲೂ ವಚನ ಸಾಹಿತ್ಯವನ್ನು ಓದಿ ಅರ್ಥೈಸಿಕೊಳ್ಳಬೇಕು. ಇದು ಸಾತ್ವಿಕ ಬದುಕುಕಟ್ಟಿಕೊಳ್ಳಲು ನೆರವಾಗುತ್ತದೆ. ಬೇರೆಯವರನ್ನು ಅರಿತುಕೊಳ್ಳುವುದಕ್ಕಿಂತ ನಮ್ಮನ್ನು ನಾವು ಅರಿತುಕೊಳ್ಳುವ ಕೆಲಸವಾಗಬೇಕು. ಆ ಪ್ರಯೋಗ ವಚನ ಸಾಹಿತ್ಯದಲ್ಲಿ ಕಾಣಸಿಗುತ್ತದೆ ಎಂದರು.
ಮನುಷ್ಯರು ತಮ್ಮ ಹಕ್ಕುಗಳ ಕುರಿತು ಕೇಳುತ್ತಾರೆ. ಆದರೆ, ಯಾರೂ ತಮ್ಮ ಕರ್ತವ್ಯ, ಜವಾಬ್ದಾರಿ, ಕಾರ್ಯವ್ಯಾಪ್ತಿ, ಸಮಾಜಕ್ಕೆ ತಮ್ಮ ಕೊಡುಗೆ ಏನು ಎಂಬದರ ಕುರಿತು ಮಾತನಾಡಲ್ಲ. ಆಧುನಿಕ ಪ್ರಗತಿಯ ನಾಗಲೋಟದಲ್ಲಿ ಮೈಮರೆತಿರುವ ಜನರು ತಮ್ಮ ಬದುಕಿನ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಅಹಂ ಯಾರಿಗೂ ಒಳ್ಳೆಯದ್ದಲ್ಲ. ಎಷ್ಟೇ ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಯನ್ನು ಅಹಂಕಾರವು ಕೆಳಗೆ ಇಳಿಸಿಬಿಡುತ್ತದೆ. ‘ನಿನ್ನನ್ನು ನೀನು ಕಂಡುಕೊಳ್ಳಬೇಕು’ ಎಂದು ಮಹಾತ್ಮಗಾಂಧಿ ಹೇಳಿರುವುದು ಪ್ರತಿಯೊಬ್ಬರಿಗೆ ದಾರಿದೀಪವಾಗಬೇಕು. ಬೇರೆಯವರಿಗೆ ಗೌರವ ಕೊಟ್ಟರೆ ಅವರ ಗೌರವ ಹೆಚ್ಚಾಗಲ್ಲ. ಬದಲಿಗೆ ನಿನ್ನ ಗೌರವ ಹೆಚ್ಚಾಗುತ್ತದೆಂಬುದನ್ನು ಯಾರೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಮಂಜುನಾಥ, ಪರಿಷತ್ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಉಪಾಧ್ಯಕ್ಷೆ ಜಯಾಗೌಡ, ಕಾರ್ಯದರ್ಶಿ ಟಿ.ಎಸ್.ಕುಮಾರಸ್ವಾಮಿ ಇನ್ನಿತರರಿದ್ದರು.