ಕನಕಪುರ : ಬೆಳೆ ಹಾಗೂ ಸಾವು ನೋವು ಉಂಟು ಮಾಡುತ್ತಿರುವ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮುಖಂಡರು ಅರಣ್ಯ ಇಲಾಖೆ ಮುಂದೆ ಪ್ರತಿಭಟಿಸಿದರು.
ನಗರದ ಅರಣ್ಯ ಇಲಾಖೆ ಕಚೇರಿಯ ಮುಂದೆ ಶನಿವಾರ ಜಮಾವಣೆಗೊಂಡ ಕಾರ್ಯಕರ್ತರು ಕಾಡಾನೆಗಳ ಹಾವಳಿ ತಪ್ಪಿಸುವಂತೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಅನ್ನದಾನಪ್ಪ ಮಾತನಾಡಿ,ತಾಲೂಕಿನಲ್ಲಿ ವಿವಿಧೆಡೆ ಕಾಡಾನೆಗಳು ದಾಳಿ ಮಾಡುತ್ತಿವೆ. ಅಪರ ಪ್ರಮಾಣದ ಫಸಲು ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ರೈತರು, ಕೂಲಿಕಾರ್ಮಿಕರ ಸಾವು ಸಂಭವಿಸಿದೆ. ಅಲ್ಲದೆ 20ಕ್ಕೂ ಹೆಚ್ಚು ರೈತರನ್ನು ಆನೆ ತುಳಿದು ಗಾಯಗೊಳಿಸಿದೆ. ಇಲ್ಲಿ ರೈತರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ದೂರಿದರು.
ಜಿಲ್ಲಾ ಅಧ್ಯಕ್ಷ ವೆಂಕಟಾಚಲ ಮಾತನಾಡಿ, ತಾಲೂಕಿನಲ್ಲಿ ಆನೆಯ ಹಾವಳಿ, ಚಿರತೆ, ಕಾಡು ಹಂದಿ ದಾಳಿಯಿಂದ ರೈತರು ನಲುಗಿ ಹೋಗಿದ್ದಾರೆ. ವಾರದಿಂದೀಚೆಗೆ ಉಯ್ಯಂಬಳ್ಳಿ ಹೋಬಳಿ, ಮರಳೇ ಗ್ರಾಮದ ಬಳಿ ಐದು ಆನೆಗಳು ಹಾಗೂ ಕೂನೂರು ಸಮೀಪದ ಸಿದ್ದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ 6 ಆನೆಗಳು ಬೀಡುಬಿಟ್ಟು ರೈತರನ್ನು ಭಯಭಿತರನ್ನಾಗಿಸಿದೆ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸದೆ ಸಣ್ಣಪುಟ್ಟ ಪಟಾಕಿ ಸಿಡಿಸಿ ಕಾಲಹರಣ ಮಾಡುತ್ತಿದ್ದಾರೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಎದ್ದು ಕಾಣುತ್ತಿರುವುದರಿಂದ ಇದರ ವಿರುದ್ಧ ಜಿಲ್ಲಾ ಅರಣ್ಯ ಇಲಾಖೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ರಾಜ್ಯ ಕಾರ್ಯದರ್ಶಿಗಳಾದ ಪಾರ್ವತಮ್ಮ, ಉಮೇಶ್, ಜಿಲ್ಲಾ ಸಂಯೋಜಕ ಮಹದೇವು, ಪ್ರಧಾನ ಕಾರ್ಯದರ್ಶಿ ಮುರುಗೇಶ್, ಜಿಲ್ಲಾ ಯೂತ್ ಅಧ್ಯಕ್ಷ ಜಯಂತ್, ಮಹಿಳಾ ಘಟಕದ ಉಪಾಧ್ಯಕ್ಷೆ ಮೆಳೆಕೋಟೆ ಶೋಭಾ, ಕಾರ್ಯದರ್ಶಿ ರಮೇಶ್, ರಾಮಣ್ಣ, ಶಿವಣ್ಣ, ನರಸಿಂಹ, ಪುಟ್ಟರಾಜು, ಲಿಂಗರಾಜು, ವಿಜ ಮತ್ತಿತರರು ಇದ್ದರು.
ಚನ್ನಪಟ್ಟಣ ಭಾಗದಲ್ಲಿ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಆದರೆ, ಕನಕಪುರದಲ್ಲಿ ಏಕೆ ಕಾಡಾನೆಗಳನ್ನು ಇಲ್ಲಿಂದ ಓಡಿಸಲು ಆಗುತ್ತಿಲ್ಲ?. ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಕಾಡಾನೆಗಳಿಂದ ಸಾವು, ನೋವು ರೈತರ ಅಪಾರ ಬೆಳೆ ಹಾನಿಯಾಗುತ್ತಿದ್ದರೂ ಸರ್ಕಾರ ಇಲ್ಲಿ ಏಕೆ ರೈತರ ಸಮಸ್ಯೆ ಕೇಳುತ್ತಿಲ್ಲ, ಇದೇನಾ ರೈತರ ಪರ ಕಾಳಜಿ.? - ವೆಂಕಟಾಚಲ, ಆಲ್ ಇಂಡಿಯಾ ಬಿಎಸ್‌ಪಿ ಜಿಲ್ಲಾಧ್ಯಕ್ಷ