ಮೈಸೂರು: ಕಾಂಗ್ರೆಸ್ ನಡೆಸಲಿರುವ ಜನಾಂದೋಲನ ಸಮಾವೇಶ ಜನಬಲ ಪ್ರದರ್ಶನಕ್ಕೆ ಸೀಮಿತವಾಗದೆ ದೇಶದಾದ್ಯಂತ ಬಿಜೆಪಿ ವಿರುದ್ಧ ಆಂದೋಲನವಾಗಿ ರೂಪುಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕೋರಿದರು.
ಜಿಲ್ಲಾ ಕಾಂಗ್ರೆಸ್‌ನಿಂದ ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜನಾಂದೋಲನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ-ಜೆಡಿಎಸ್ ನಾಯಕರಿಗೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವುದು ಮಾತ್ರವಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶಗೊಳಿಸಲು ಪಾದಯಾತ್ರೆ ನಡೆಸುತ್ತಿವೆ. ಇದಕ್ಕೆ ಕಾಂಗ್ರೆಸ್ಸಿಗರು, ತಕ್ಕ ಪ್ರತಿಕ್ರಿಯೆ ನೀಡಬೇಕು ಎಂದರು.
ಕಾಂಗ್ರೆಸ್‌ನಿಂದ ನಡೆಯುವ ಜನಾಂದೋಲನ ಇಡೀ ದೇಶದಲ್ಲಿಯೇ ಬಿಜೆಪಿ ವಿರುದ್ಧ ಅಂದೋಲನಾ ರೂಪುಗೊಳ್ಳಬೇಕು. ಆಗ ಪ್ರತಿಪಕ್ಷಗಳಿಗೆ ತಕ್ಕ ಪಾಠ ಕಲಿಸಿದಂತೆ ಅಗುತ್ತದೆ ಎಂದರು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಿರುವ ನಿವೇಶನ ಕಾನೂನು ಬದ್ಧವಾಗಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರಬೇಕು, ಅವರನ್ನು ಅಧಿಕಾರದಿಂದ ಇಳಿಸಿದರೆ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ಕುತಂತ್ರ ನಡೆಸುತ್ತಿವೆ. ಜೆಡಿಎಸ್-ಬಿಜೆಪಿ ಕುತಂತ್ರದ ಒಗ್ಗಟ್ಟು ಹೆಚ್ಚಿನ ಕಾಲ ಉಳಿಯುವುದಿಲ್ಲ. ಬಿಜೆಪಿ-ಜೆಡಿಎಸ್‌ನ ಹಗರಣಗಳು ನೂರು ಪಟ್ಟು ಇವೆ. ಅದನ್ನು ಜನರಿಗೆ ತಿಳಿಸಬೇಕು ಎಂದರು.
ಮುಡಾ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ಸಿದ್ದರಾಮಯ್ಯ ಸಮರ್ಥ, ಪ್ರಾಮಾಣಿಕತೆಯುಳ್ಳ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆ ತರಲು, ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ವಿರೋಧಪಕ್ಷಗಳ ಸಂಚನ್ನು ವಿಫಲಗೊಳಿಸುವ ಅಗತ್ಯವಿದೆ. ಜನಾಂದೋಲನ ಕಾರ್ಯಕ್ರಮದ ಯಶಸ್ಸಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ 10 ಸಾವಿರ ಜನರನ್ನು ಕರೆತರಲಿದ್ದೇನೆ. ಮುಖ್ಯಮಂತ್ರಿಗೆ ನೈತಿಕ ಶಕ್ತಿ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಬಂದಿರುವ ಕಳಂಕವನ್ನು ಅಳಿಸಬೇಕು. ಕೇಂದ್ರದ ಕೈಗೊಂಬೆಯಾಗಿ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡಬೇಕಿದೆ. ಇದು ಕಾಂಗ್ರೆಸ್ ಸರ್ಕಾರದ ಅಸ್ತಿತ್ವದ ಪ್ರಶ್ನೆ. ಹೀಗಾಗಿ ಜನಾಂದೋಲನ ಯಶಸ್ವಿಯಾಗಬೇಕು ಎಂದು ಕೋರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಆ.9ರಂದು ನಡೆಯುವ ಜನಾಂದೋಲನಕ್ಕೆ ಒಂದು ವಿಧಾನಸಭಾ ಕ್ಷೇತ್ರದಿಂದ 10 ಸಾವಿರ ಜನರು ಸ್ವಯಂ ಪ್ರೇರಿತವಾಗಿ ಬರಬೇಕು. ಭಾರತ್ ಜೋಡೋ ಮಾದರಿಯಲ್ಲಿ ಜನ ಸೇರಬೇಕು ಎಂದು ಮನವಿ ಮಾಡಿದರು.
ಬಿಜೆಪಿ-ಜೆಡಿಎಸ್ ಮೈಸೂರಿನಲ್ಲಿ ನಡೆಸುವ ದಾಳಿಗೆ ಹೆದರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಆದರೆ ಮೈಸೂರಿನಲ್ಲಿ ನಡೆಯುವ ಜನಾಂದೋಲನ ಸಮಾವೇಶ ಇವರಿಗೆ ಉತ್ತರ ನೀಡಿ ಇತಿಹಾಸದಲ್ಲಿ ದೊಡ್ಡ ಸಮಾವೇಶವಾಗಲಿದೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸದಸ್ಯ ಆರ್.ಧರ್ಮಸೇನಾ, ಎಐಪಿಸಿಸಿ ಮಾಧ್ಯಮ ವಕ್ತಾರ ಐಶ್ವರ್ಯ ಮಹದೇವ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೂರ್ಗಳ್ಳಿ ಮಹದೇವ್, ಬಿ.ಎಂ.ರಾಮು, ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಅರುಣ್‌ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಿ.ಕೆ.ಬಸವಣ್ಣ, ಕಾಂಗ್ರೆಸ್ ನಗರ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾಲತಾ ಚಿಕ್ಕಣ್ಣ ಇತರರು ಇದ್ದರು.