ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಲ್ಲಮನ ವಚನಗಳಲ್ಲಿ ಅರಿವು ಕಾರ್ಯಕ್ರಮವನ್ನು ಗಣ್ಯರು ರಾಗಿಯನ್ನು ಬೀರುವ ಮೂಲಕ ಉದ್ಘಾಟಿಸಿದರು. ಡಾ.ಬಿ.ವಿ.ವಸಂತಕುಮಾರ್, ಡಾ.ಬಿ.ಸಿ.ಸುರೇಶ್, ಕುಮಾರ್.ಡಾ.ಎಂ.ಆರ್.ರಾಶಿ, ಡಿ.ಸಿ.ಶಿಲ್ಪಾ ಇತರರಿದ್ದರು. 
ಜಿಲ್ಲೆ

ಜ್ಞಾನ ಮಂಥನವಾಗಲಿ, ವಾದವಾಗದಿರಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಹುಣಸೂರು : ಅನ್ನ ಮತ್ತು ಜ್ಞಾನ ಎನ್ನುವುದು ಒಂದೇ ನಾಣ್ಯದ ಮುಖಗಳಾಗಿದ್ದು, ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವಿಬೇಕು ಎಂದು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್ ಹೇಳಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಶರಣರ ವೈಚಾರಿಕತೆ ವಿದ್ಯಾರ್ಥಿಗಳೆಡೆಗೆ ಕಾರ್ಯಕ್ರಮದಲ್ಲಿ ಅಲ್ಲಮನ ವಚನಗಳಲ್ಲಿ ಅರಿವು ವಿಷಯದ ಕುರಿತು ಉಪನ್ಯಾಸ ನೀಡಿದರು.

ನಮ್ಮೊಳಗೆ ಅರಿವು ಬರಬೇಕೆಂದರೆ ನಾವು ಚೇತನವಾಗಬೇಕೆಂದು ಅಲ್ಲಮಪ್ರಭು ಪ್ರತಿಪಾದಿಸಿದ್ದಾರೆ. ನಾವು ಕಲ್ಲಾದರೆ ನಮ್ಮ ಜತೆಯಿರುವವರೂ ಕಲ್ಲಾಗುತ್ತಾರೆ. ಶಿಲೆಯೊಳಗಿನ ಶಿಲ್ಪ ಹೊರಬರಲು ಅರಿವು ಎನ್ನುವ ಗುರು ಅಗತ್ಯ. ಪ್ರತಿಯೊಬ್ಬರಲ್ಲೂ ಅಗಾಧ ಶಕ್ತಿ, ಜ್ಞಾನ ಇರುತ್ತದೆ. ಹೊಟ್ಟೆ ಹಸಿದರೆ ಮಾತ್ರ ಬಾಯಿ ತೆರೆಯುತ್ತದೆ. ಶರೀರಕ್ಕೆ ಅನ್ನ ಅಗತ್ಯ, ಮನಸಿಗೆ ಜ್ಞಾನ ಅಗತ್ಯ. ಹಾಗಾಗಿಯೇ ಅಲ್ಲಮಪ್ರಭುವನ್ನು ಜ್ಞಾನಯೋಗಿ ಎನ್ನುತ್ತಾರೆ. ಅಂತೆಯೇ ಜ್ಞಾನದಾಹಿಗೆ ಮಾತ್ರ ಮೆದುಳು ತನ್ನ ಬಾಗಿಲನ್ನು ತೆರೆದು ಜ್ಞಾನವನ್ನು ಪಡೆದುಕೊಳ್ಳುತ್ತದೆ. ನಿಮ್ಮ ಹೃದಯ, ಮೆದುಳು ಮತ್ತು ಬುದ್ಧಿ ಜ್ಞಾನದ ಹಸಿವನ್ನು ನೀಗಿಸುವ ಕಾರ್ಯ ನಿಮ್ಮಿಂದಾಗಬೇಕೆಂದರು.

ಜ್ಞಾನ ಎಂದರೆ ಬದುಕುವ ಕಲೆ: ಜ್ಞಾನ ಎಂದರೆ ಕೇವಲ ಅಂಕಗಳಿಸುವುದಲ್ಲ, ಸಾವು ನೋವುಗಳಿಲ್ಲದೇ ಬದುಕುವ ಕಲೆಯೇ ಜ್ಞಾನ. ಜ್ಞಾನ ಮಂಥನವಾಗಬೇಕೇ ಹೊರತು ವಾದವಾಗಬಾರದು. ಅಮೃತತ್ವವೇ ಜ್ಞಾನ. ಜ್ಞಾನ ಎಂದರೆ ಸೈಟು, ಬಂಗಾರ ಅಲ್ಲ. ಬೇರೆಯವರಿಗೆ ಸಾವು ನೋವು ಕೊಡದಂತೆ ಬದುಕುವ ಕಲೆ ಎಂದು ಅಲ್ಲಮಪ್ರಭು ತಿಳಿಸುತ್ತಾರೆ. ಶಿಕ್ಷಣ ಎನ್ನುವುದು ಓದುವುದು ಎನ್ನುವುದಲ್ಲ. ಬದಲಾಗಿ ಅದೊಂದು ಅನುಭವ. ಜ್ಞಾನವಿಲ್ಲದಿದ್ದರೆ ನೋವು ಮತ್ತು ಸಾವು ಖಂಡಿತ. ಜೀವನ ನಡೆಸಲು ಜ್ಞಾನ ಅಗತ್ಯ. ಇದೆಲ್ಲವನ್ನು ಕಲಿಸುವವರು ನಮ್ಮೊಳಗಿನ ಹೃದಯ, ಮದುಳು ಆಗಿರುತ್ತದೆ. ನಮ್ಮನ್ನು ನಾವು ಹೊರಪ್ರಪಂಚಕ್ಕೆ ತೆರದುಕೊಳ್ಳದಿದ್ದರೆ, ಹೊರಪ್ರಪಂಚದ ಜ್ಞಾನ ನಮ್ಮೊಳಗೆ ಬರಲು ಸಾಧ್ಯವಿಲ್ಲವೆಂದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿ, ಅಲ್ಲಮಪ್ರಭು ಈ ಜಗತ್ತು ಕಂಡ ಅತ್ಯಂತ ದೊಡ್ಡ ದಾರ್ಶನಿಕ. ಅಲ್ಲಮನಂತಹ ಮತ್ತೊಬ್ಬ ಮೇಧಾವಿ ಕಾಣುತ್ತಿಲ್ಲ. ಅನುಭವಮಂಟಪದ ಶೂನ್ಯಪೀಠದ ಅಧಿಪತಿಯಾಗಿ ಎಲ್ಲ ವಚನಕಾರರನ್ನು ಪ್ರಶ್ನಿಸಿ ವಿಚಾರಮಂಥನ ನಡೆಸಿ ಸಂದೇಶ ನೀಡುತ್ತಿದ್ದರು. ಜನಸಾಮಾನ್ಯರಿಗಾಗಿ 12ನೇ ಶತಮಾನದ ವಚನಕಾರರು ಸಮಾನತೆಗಾಗಿ ನಡೆಸಿದ ಗಟ್ಟಿಯಾದ ಆಂದೋಲನ ಈವರೆಗೆ ಕಂಡಿಲ್ಲ. ಅಲ್ಲಮ ಯಾಕೆ ವಿಮರ್ಶಾತೀತವಾಗುತ್ತಿದ್ದಾನೆ, ಅಲ್ಲಮ ಯಾಕೆ ಎಲ್ಲರಿಂದ ದೂರವಾಗುತ್ತಿದ್ದಾನೆ ಎಂದರೆ ಅಲ್ಲಮನನ್ನು ಅರ್ಥ ಸರಿಯಾಗಿ ಅರ್ಥ ಮಾಡಿಕೊಳ್ಳುವುದೇ ಸಾಧ್ಯವಾಗದಿರುವುದು ಎನ್ನಬಹುದಾಗಿದೆ. ಅಲ್ಲಮನ ಅಗಾಧ ಪಾಂಡಿತ್ಯ, ಚಿಂತನೆಗೆಳನ್ನು ಅರಿತು ಅರಗಿಸಿಕೊಳ್ಳಬೇಕಿದೆ. ವಚನಕಾರರ ಸಾಮಾಜಿಕ ಕಳಕಳಿಯನ್ನು ಈ ಕಾಲಘಟ್ಟದ ಯುವಕರಿಗೆ ತಿಳಿಸಬೇಕೆನ್ನುವುದೇ ಶರಣ ಸಾಹಿತ್ಯ ಪರಿಷತ್‌ನ ಉದ್ದೇಶವಾಗಿದೆ. ಈವರೆಗೆ 28 ಕಾರ್ಕ್ರಮಗಳನ್ನು ವಿವಿಧ ಶಾಲಾ ಕಾಲೇಜುಗಳಲ್ಲಿ ಆಯೋಜಿಸಿ ಶರಣರ ತತ್ವಗಳನ್ನು ತಿಳಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಿ.ಸಿ.ಸುರೇಶ್ ಮಾತನಾಡಿ, ಬುದ್ಧನಕಾಲದಿಂದ ಆರಂಭಗೊಂಡು ಎಲ್ಲ ಸಾಮಾಜಿಕ, ಸಾಹಿತ್ಯಕ ಘಟನೆಗಳು, ಎಲ್ಲ ಮಹನೀಯರ ಕಾಲಘಟ್ಟದಲ್ಲೂ ಎಲ್ಲರನ್ನು ಒಂದಾಗಿಸುವ ಕಾರ್, ಸಮಾನತೆಯನ್ನು ಸಾರುವ ಸಂದೇಶವನ್ನೇ ನೀಡಿದ್ದು ಅದರ ಅನುಷ್ಠಾನದಲ್ಲಿ ನಾವೆಲ್ಲರೂ ಎಡುವುತ್ತಿದ್ದೇವೆ ಎಂದರು.

ಕಾರ್ಯಕ್ರಮವನ್ನು ಗಣ್ಯರು ರಾಗಿಬೀಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿದರು. ಕನ್ನಡ ವಿಬಾಗದ ಸಹಾಯಕ ಪ್ರಾಧ್ಯಾಪಕರಾದ ಆರ್.ಕುಮಾರ್, ಡಾ.ಎಂ.ಆರ್.ರಾಶಿ, ಡಿ.ಸಿ.ಶಿಲ್ಪಾ, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಸೇರಿದಂತೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.