ಜಿಲ್ಲೆ

ಅನ್ವರ್​ ಮಾಣಿಪ್ಪಾಡಿ ವಿರುದ್ಧ ಸಿಬಿಐ ತನಿಖೆಯಾಗಲಿ

 ಕೋಲಾರ: ವಕ್ಫ್​ಬೋರ್ಡ್​ ವಿಚಾರವಾಗಿ ಬಿಜೆಪಿ ನಾಯಕ ಅನ್ವರ್​ ಮಾಣಿಪ್ಪಾಡಿ ಮಾಡಿರುವ 150 ಕೋಟಿ ರೂ. ಲಂಚದ ಆರೋಪವನ್ನು ಇಡಿ ಮತ್ತು ಸಿಬಿಐಗೆ ವಹಿಸಲಿ, ಕಾಂಗ್ರೆಸ್​ನವರ ವಿರುದ್ಧ ತನಿಖೆ ಮಾಡಲು ಮಾತ್ರ ಇಡಿ&ಸಿಬಿಐ ಇದೆಯೇ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದರು.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅನ್ವರ್​ ಮಾನಪ್ಪಾಡಿ ಅವರ ಲಂಚ ಆರೋಪವನ್ನು ಮುಚ್ಚಿ ಹಾಕಲು ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮತ್ತು ವಿಜಯೇಂದ್ರ ಒತ್ತಡ ಹೇರಿದ್ದಾರೆ. ಆರೋಪ ಮಾಡಿರುವುದು ಸಿಎಂ ಸಿದ್ದರಾಮಯ್ಯ ಅಲ್ಲ, ಬಿಜೆಪಿಯ ಪ್ರಮುಖ ನಾಯಕ, ಪ್ರತಿದಿನ ಸುಳ್ಳು ಆರೋಪಗಳಿಗೆಲ್ಲ ಇಡಿ ಮತ್ತು ಸಿಬಿಐ ನೋಟಿಸ್​ ನೀಡುತ್ತಾರೆ. ಸಿಬಿಐಗೆ ಸಾಂವಿಧಾನಿಕ ಜವಾಬ್ದಾರಿ ಇದ್ದರೆ ಅನ್ವರ್​ ಅವರನ್ನು ವಶಕ್ಕೆ ಪಡೆದು ತನಿಖೆ ಮಾಡಬೇಕು. ಆಗ ಸತ್ಯಾಸತ್ಯತೆ ಹೊರ ಬರುತ್ತದೆ ಎಂದರು.

ಅದಾನಿ ಮೇಲೆ 2,500 ಸಾವಿರ ಕೋಟಿ ಲಂಚ ಆರೋಪ ಕುರಿತು ಅಮೆರಿಕದಲ್ಲಿ ಎಫ್​ಐಆರ್​ ಆಗಿದೆ. ಈ ಪ್ರಕರಣದಲ್ಲಿ ಇಡಿ ಮತ್ತು ಸಿಬಿಐ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಹೆಣದ ಮೇಲೆ ಹಣ ಮಾಡಿದ್ದು ಮರಿಬೇಕಾ?

ಕೋವಿಡ್​ ಹಗರಣದ ತನಿಖೆ ಬಗ್ಗೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಗದೀಶ್​ ಶೆಟ್ಟರ್​ ಹೇಳಿಕೆಗೆ ತಿರುಗೇಟು ನೀಡಿದ ಕೃಷ್ಣಬೈರೇಗೌಡ, ಹೆಣದಲ್ಲಿ ಹಣ ಮಾಡಿರುವುದನ್ನು ಮರೆಯಬೇಕಾ?, ಕಳಪೆ ಸಾಮಗ್ರಿ ಟೆಸ್ಟಿಂಗ್​ನಲ್ಲಿ ಡಬಲ್​ ದುಡ್ಡು ಮಾಡಿದ್ದು, ಸಾವಿನಲ್ಲಿಯೂ ಹಣ ಮಾಡಿದನ್ನು ಬಿಟ್ಟು ಬಿಡಬೇಕಾ ಎಂದ ಅವರು ನ್ಯಾಯಾಂಗ ತನಿಖೆಯ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರಾಕ್ಷಸ ಪ್ರವೃತ್ತಿ

ಹಿಂದು ಧರ್ಮದ ಹೆಸರಿನಲ್ಲಿ ಓಟು ಹಾಕಿಸಿಕೊಳ್ಳುವ ಬಿಜೆಪಿ, ಮಾರಕ ಕಾಯಿಲೆ ದೇಶ ಮತ್ತು ಪ್ರಪಂಚವನ್ನು ಬುಡಮೇಲು ಮಾಡುವಾಗ ಅದರಲ್ಲೂ ದುಡ್ಡು ಮಾಡಿದ ಖ್ಯಾತಿ ಬಿಜೆಪಿಗೆ ಸಲ್ಲಬೇಕು. ಇದು ಹಿಂದು ಧರ್ಮಕ್ಕೆ ಮಾಡಿದ ಅಪಮಾನವಲ್ಲವೇ ಸತ್ಯ ಸಂಗತಿ ಹೊರಬರಬೇಕೆಂದರೆ ತನಿಖೆಯಾಗಲೇಬೇಕು. ಕೋವಿಡ್​ ಸಾವಿನಲ್ಲೂ ದುಡ್ಡು ಮಾಡಿದ್ದು, ಜಗದೀಶ್​ ಶೆಟ್ಟರ್​ಗೆ ಮತ್ತು ಬಿಜೆಪಿಗೆ ತಪು ಎನಿಸಲಿಲ್ಲವೇ? ಯಾರೂ ಸಾಚಾಗಳಲ್ಲ, ಯಾರೂ ದುಡ್ಡು ಮಾಡಲ್ಲ ಎಂದಲ್ಲ. ಮಾನವೀಯತೆ ಇಲ್ಲದೆ ದುಡ್ಡು ಮಾಡಿದವರು ರಾಕ್ಷಸ ಪ್ರವೃತ್ತಿಗೆ ಸೇರಿದವರಾಗಿದ್ದಾರೆ. ಇದು ತನಿಖೆ ಆಗಲೇಬೇಕಾಗಿದೆ ಎಂದು ಕೃಷ್ಣಬೈರೇಗೌಡ ಆಗ್ರಹಿಸಿದರು.