ಜಿಲ್ಲೆ

ಶಿಕ್ಷಣ ಪಡೆದು ಅಂಬೇಡ್ಕರ್ ಗೌರವಿಸಲಿ

ಅಥಣಿ: ಸಂವಿಧಾನದ ಮೂಲಕ ಪರಮೋಚ್ಚ ಅಧಿಕಾರ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಬೇಕಾದರೆ ಸಮುದಾಯದ ಮಕ್ಕಳು ಶಿಕ್ಷಣವಂತರಾಗಬೇಕು ಎಂದು ಬೆಳಗಾವಿ ಅಬಕಾರಿ ಇಲಾಖೆ ಜಂಟಿ ಆಯುಕ್ತ ಫಕೀರಪ್ಪ ಚಲುವಾದಿ ಹೇಳಿದರು.

ಪಟ್ಟಣದ ಶಿವಣಗಿ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸಿದ್ದು, ಅದರ ಸದುಪಯೋಗ ಪಡೆದು ಜಾಗೃತರಾಗಬೇಕು. ದೇಶದಲ್ಲಿ ೩೦ಲಕ್ಷ ಸಮುದಾಯದ ಸಂಘಟನೆಗಳಿದ್ದು, ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.

ಐಪಿಎಸ್ ಅಧಿಕಾರಿ ರವೀಂದ್ರ ಗಡಾದೆ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಮತ್ತು ಶಿಸ್ತು, ಸಂಸ್ಕೃತಿ ಮರೆಯಬಾರದು. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವುದು ಪಾಲಕರ ಜವಾಬ್ದಾರಿಯಾಗಿದೆ. ಹಳ್ಳಿಗಳಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಗಳಿಸಿದ ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಉದ್ಯಮಿ ಸಿ.ಆರ್.ಸಾಂಗ್ಲಿಕರ, ಡಾ.ಗೀತಾ ಕಾಂಬಳೆ, ಎಂ.ಪಿ,ಮೇತ್ರಿ, ಭಾರತಿ ಕಾಂಬಳೆ ಮಾತನಾಡಿದರು.

ಗೂಗವಾಡದ ಭಂತೇಜಿ ಜ್ಞಾನಜ್ಯೋತಿ, ಮೊಹನ ಕಾಂಬಳೆ, ವಿಲಾಸ ಕಾಂಬಳೆ, ಆರ್.ಕೆ.ಕಾಂಬಳೆ ಇತರರಿದ್ದರು.