ಜಿಲ್ಲೆ

ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ನೀಡಲಿ

ಪ್ರಶಾಂತ ಹೂಗಾರ

ನಿಪ್ಪಾಣಿ: ವಿದ್ಯಾರ್ಥಿ ಸಾಮರ್ಥ್ಯಕ್ಕೆ ತಕ್ಕಂತೆ ಜೀವನದ ದಾರಿ ತೋರಿಸುವುದು ಪ್ರತಿ ಶೈಕ್ಷಣಿಕ ಸಂಸ್ಥೆಗಳ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ವಿದ್ಯಾ ಸಂವರ್ಧಕ ಮಂಡಳ ವಿದ್ಯಾರ್ಥಿಗಳಿಗೆ ಜೀವನದ ಗುರಿ ತಲುಪುವ ಮಾರ್ಗ ತೋರುತ್ತಿದೆ ಎಂದು ಧಾರವಾಡ ಐಐಟಿ ಡೀನ್ ಡಾ. ಕೆ. ಗೋಪಿನಾಥ ಹೇಳಿದರು.

ಸ್ಥಳೀಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಆವೇಶಂ ಟೆಕ್ನೋ ಕಲ್ಚರಲ್ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಗುಣಗಳನ್ನು ಮೈಗೂಡಿಸಿಕೊಂಡಿರುವ ಪರಿಣಾಮ ವಿಎಸ್‌ಎಂಎಸ್‌ಆರ್‌ಕೆಐಟಿಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಅಗ್ರ ನೂರರ ಸ್ಥಾನದಲ್ಲಿ ಬರುತ್ತಿದ್ದಾರೆ. ಗಡಿಭಾಗದಲ್ಲಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿಸಿ ಅದನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಮಂಡಳದ ಕಾರ್ಯ ಶ್ಲಾಘನೀಯ ಎಂದರು.

ಹತ್ತರಗಿ ಏಕಸ್ ಕಂಪನಿಯ ಕೌಶಲ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ವಿಶಾಲ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳುವುದು ಅವಶ್ಯವಾಗಿದೆ. ವಿದ್ಯಾರ್ಥಿಗಳಿಗೆ ಬೇಕಾಗುವ ಕೌಶಲವನ್ನು ವಿಎಸ್‌ಎಂಎಸ್‌ಆರ್‌ಕೆಐಟಿ ನೀಡುತ್ತಿದೆ ಎಂದು ತಿಳಿಸಿದರು.

ವೈಸ್ ಚೇರ್ಮನ್ ಪಪ್ಪು ಪಾಟೀಲ ಮಾತನಾಡಿ, ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸಂಚಾಲಕ ಸಂಜಯ ಶಿಂತ್ರೆ, ಪ್ರಾಚಾರ್ಯ ಡಾ. ಉಮೇಶ ಪಾಟೀಲ, ಶಿಕ್ಷಕ ಬಾಬಾಸಾಬ್ ನದಾಫ್ ಮಾತನಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಟಾಪ್ 100ರಲ್ಲಿ ಸ್ಥಾನ ಗಳಿಸಿದ ಮಹಾವಿದ್ಯಾಲಯದ 41 ವಿದ್ಯಾರ್ಥಿಗಳಿಗೆ 2.89 ಲಕ್ಷ ರೂ. ಬಹುಮಾನ ವಿತರಿಸಲಾಯಿತು.

ಮಂಡಳದ ಕಾರ್ಯದರ್ಶಿ ಸಮೀರ್ ಬಾಗೇವಾಡಿ, ಉಪಾಧ್ಯಕ್ಷ ರಜತ ಢೋಲೆ, ಸಂಚಾಲಕ ಸಂಜಯ ಮೊಳವಾಡೆ, ಅವಿನಾಶ ಪಾಟೀಲ, ಪ್ರವೀಣ ಪಾಟೀಲ, ಸಚಿನ ಹಾಲಪ್ಪನವರ, ಶೇಖರ ಪಾಟೀಲ ಇತರರು ಇದ್ದರು.

ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಸಂತೋಷ ಕೋಳಕಿ ಸ್ವಾಗತಿಸಿದರು. ಜನರಲ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ. ಕವಿತಾ ವಸೇದಾರ ಮತ್ತು ಪ್ರೊ. ಮಾಧವಿ ಅವಳೇಕರ ನಿರೂಪಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥೆ ರೀನಾ ಖಡಬಡಿ ವಂದಿಸಿದರು.