ಧಾರವಾಡ: ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕಿದ ಹಿಂದಿನ ಹಿರಿಯರ ತ್ಯಾಗ ಮತ್ತು ಶ್ರಮದಿಂದ ಇಂದು ಕನ್ನಡಿಗರು ಒಂದಾಗಿ ಬಾಳುವಂತೆ ರಾಜ್ಯ ನಿರ್ಮಾಣ ಆಗಿದೆ ಎಂದು ಕಲಾವಿದ ಶಿ.ಮ. ರಾಚಯ್ಯನವರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ-50 ಸಂಭ್ರಮ ನಿಮಿತ್ತ ಶನಿವಾರ ಏರ್ಪಡಿಸಿದ್ದ ಸಂಗೀತೋತ್ಸವ ಮತ್ತು ಕಲಾವಿದ ಪ್ರಭು ಕುಂದರಗಿ ಅವರಿಗೆ ಜನಪದ ಸಿರಿ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ನಾಡಿನ ನೆಲ, ಜಲ, ಭಾಷೆ ಬಗ್ಗೆ ಗಂಭೀರವಾಗಿ ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ನಾಡು, ನುಡಿ ಬಗ್ಗೆ ಹೆಮ್ಮೆ ಮೂಡಲು ಸಾಧ್ಯ ಎಂದರು.
ಪ್ರಭು ಕುಂದರಗಿ ಮಾತನಾಡಿ, ಗ್ರಾಮೀಣ ಯುವಕರು ಇಂದಿಗೂ ಜನಪದ ಉಳಿವಿನ ಬಗ್ಗೆ ಕಾಳಜಿ ಹೊಂದಿದ್ದಾರೆ. ಪ್ರತಿ ಹಳ್ಳಿಯಲ್ಲಿ ಜನಪದ ಕಲೆ ಜೀವಂತವಾಗಿವೆ. ಅದಕ್ಕಾಗಿ ಶ್ರಮಿಸುವವರನ್ನು ಸಂಘ ಗುರುತಿಸಿ ಸನ್ಮಾನಿಸುತ್ತಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸತೀಶ ತುರಮರಿ ಮಾತನಾಡಿ, ಜನಪದ ಕಲಾವಿದರು ಯಾರೂ ಶ್ರೀಮಂತರಲ್ಲ. ಅವರಲ್ಲಿ ಕಲೆಯ ಬದ್ಧತೆ ಮಾತ್ರ ಇರುವುದರಿಂದ ಜನಪದ ಕಲೆ ಅಪ್ಪಿಕೊಂಡು ಪೋಷಿಸುತ್ತಿದ್ದಾರೆ ಎಂದರು.
ಪ್ರಭು ಕುಂದರಗಿ, ಪ್ರಿಯಾಂಕಾ ಕುಂದರಗಿ ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು.