ಆಲೂರು: ಎಲ್ಲ ದಾನಗಳಿಗಿಂತ ರಕ್ತದಾನ ಮಹಾ ಶ್ರೇಷ್ಠವಾದುದು. ಅಮೂಲ್ಯ ಜೀವ ಉಳಿಸಲು ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಸಲಹೆ ನೀಡಿದರು.
ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರೇಹಳ್ಳಿ ಗ್ರಾಮದಲ್ಲಿರುವ ಶ್ರೀ ಕೆಂಚಮ್ಮ ದೇವಸ್ಥಾನ ಆವರಣದಲ್ಲಿ ಭಾನುವಾರ ಹೊಸಕೋಟೆ ಲಯನ್ಸ್ ಕ್ಲಬ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ಎಸ್‌ಪಿವೈಎಸ್‌ಎಸ್) ಹಾಗೂ ಜೀವ ರಕ್ಷ ರಕ್ತ ನಿಧಿ ಕೇಂದ್ರ ವತಿಯಿಂದ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಸಮಾಜದಲ್ಲಿ ಪ್ರತಿನಿತ್ಯ, ಪ್ರತಿಕ್ಷಣದಲ್ಲೂ ನಾನಾ ಕಾರಣಗಳಿಂದ ರಕ್ತಹೀನತೆ ಉಂಟಾದಾಗ, ಅಂತಹ ಸಂದರ್ಭದಲ್ಲಿ ಅಂತಹ ವ್ಯಕ್ತಿಗಳಿಗೆ ರಕ್ತ ನೀಡಿ ಬದುಕಿಸಲು ಅವಶ್ಯಕವಾಗಿ ರಕ್ತ ಬೇಕಾಗುತ್ತದೆ. ಆರೋಗ್ಯವಂತ ಯುವಕರು ಅಂತಹವರನ್ನು ಸಮಾಜದಲ್ಲಿ ಬದುಕಿಸಿಕೊಳ್ಳಲು ರಕ್ತದಾನ ಮಾಡಲು ಮುಂದಾಗಬೇಕು ಎಂದು ಯುವಕರಿಗೆ ಮನವಿ ಮಾಡಿದರು.
ಹೊಸಕೋಟೆ ಲಯನ್ಸ್ ಇಂಟರ್‌ನ್ಯಾಷನಲ್ ಅಧ್ಯಕ್ಷ ಕೆ.ಎನ್.ಕುಮಾರ್ ಮಾತನಾಡಿ, ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ವರ್ಷವೂ ಆರೋಗ್ಯಕ್ಕಾಗಿ ಯೋಗ ಕಾರ್ಯಕ್ರಮದಡಿ 15 ದಿನಗಳ ಯೋಗ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದೇವೆ. ಅದರಂತೆ ಈ ವರ್ಷವೂ ಕೂಡ ಹರಿಹಳ್ಳಿ ವಿ.ಪಿ.ಹೆಗ್ಗಡೆ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ 15 ದಿನಗಳ ಆರೋಗ್ಯಕ್ಕಾಗಿ ಯೋಗ ಕ್ಯಾಂಪ್ ನಡೆಸಲಾಯಿತು. 35 ರಿಂದ 40ರಷ್ಟು ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬಿಜೆಪಿ ಯುವ ಮುಖಂಡರಾದ ಪ್ರಸಾದ್, ಕಟ್ಟೆಗದ್ದೆ ನಾಗರಾಜ್, ಕೆಂಚಾಂಬ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಘು, ಲಯನ್ಸ್ ಖಜಾಂಚಿ ಕುಮಾರ್ ಬೆಂಬಳೂರು, ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಹೊಂಕ್ಕರವಳ್ಳಿ, ಸಂತೋಷ್ ಕೊಟ್ಟೂರಪ್ಪ, ಉದಯ್ ಕುಮಾರ್ ಕಿತ್ತಗಳಲೆ, ಜಗದೀಶ್, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಆಯೋಜಕರಾದ ಶೋಭಾ ಯೋಗರಾಜ್, ಶಿಕ್ಷಕರಾದ ನೀಲಕಂಠಪ್ಪ, ಸ್ವಾಮಿ ಇದ್ದರು.