ಬೀಳಗಿ: ಕನ್ನಡ ಭಾಷೆ ನಮ್ಮ ತಾಯಿ ಭಾಷೆ. ಆದರೆ ಇತರೆ ಭಾಷೆಗಳ ಜ್ಞಾನವೂ ಬಹಳ ಅಗತ್ಯವಾಗಿದೆ ಎಂದು ಬಿ.ಎನ್. ಖೋತ ಇಂಟರ್ ನ್ಯಾಷನಲ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಖೋತ ಹೇಳಿದರು.
ತಾಲೂಕಿನ ಅನಗವಾಡಿ ಶ್ರೀ ಬನಶಂಕರಿದೇವಿ ವಿದ್ಯಾಸಂಸ್ಥೆಯ ಬಿ.ಎನ್. ಖೋತ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಹಾಗೂ ಬಿ.ಎನ್. ಖೋತ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಅನಗವಾಡಿ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಿಯಲು ಕೋಟಿ ಭಾಷೆಗಳಿವೆ. ಆದರೆ, ಮಾತನಾಡಲು ನಮಗೆ ಕೇವಲ ಕನ್ನಡ ಒಂದೇ ಸಾಕು. ಇಂದಿನ ಯುವ ಜನತೆ ದೇಶ ಹಾಗೂ ನಾಡಿನ ಅಭಿವೃದ್ಧಿಗೆ ಚಿಂತನೆ ಮಾಡುವುದು ಅಗತ್ಯ. ಕನ್ನಡಾಭಿಮಾನದ ಅವರಲ್ಲಿ ಇನ್ನೂ ಮೈಗೂಡಿಸಿಕೊಳ್ಳುವಂತೆ ಮಾಡಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಬೀಳಗಿ ತಾಲೂಕು ಘಟಕದ ಅಧ್ಯಕ್ಷ ಶಿಕ್ಷಕ ಗುರುರಾಜ ಲೂತಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಹಿರಿಯರಿಂದ ಬರುವ ಆಸ್ತಿಯಲ್ಲಿ ಭಾಷೆಯೂ ಒಂದು. ಅದು ನಮ್ಮ ಬದುಕಿನ ಶ್ರೇಷ್ಠ ಸಂಪತ್ತು. ಅದನ್ನು ಪಾರಂಪರಿಕವಾಗಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಂಸ್ಥೆಯ ಪ್ರಾಚಾರ್ಯ ಸುರೇಶ ಹವಾಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಈರಣ್ಣ ಗೋಡಿ, ನಿರ್ದೇಶಕರಾದ ಶೋಭಾ ಖೋತ, ವಿಜಯ ಖೋತ, ಶಾಲೆ ಮತ್ತು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು.