ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯವನ್ನು ಶಾಸಕ ಎಚ್.ಟಿ.ಮಂಜು, ಮನ್ಮುಲ್ ನಿರ್ದೇಶಕ ಕೆ.ಡಾಲು ರವಿ ವಿತರಿಸಿದರು.  
ಜಿಲ್ಲೆ

ಯುವಕರು ವಲಸೆ ಹೋಗುವ ಬದಲು ಹೈನುಗಾರಿಕೆ ಮಾಡಲಿ

ಕೆ.ಆರ್.ಪೇಟೆ: ಗ್ರಾಮೀಣ ಜನರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಹೈನುಗಾರಿಕೆ ಸಹಕಾರಿ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.

ಮರಣ ಹೊಂದಿದ ರಾಸುಗಳು ಹಾಗೂ ಆಕಸ್ಮಿಕವಾಗಿ ಮರಣ ಹೊಂದಿದ ಹಾಲು ಉತ್ಪಾದಕರ ಕುಟುಂಬದವರಿಗೆ ಪರಿಹಾರದ ಚೆಕ್ ಮತ್ತು ಹಾಲು ಕರೆಯುವ ಯಂತ್ರಗಳಿಗೆ ಸಬ್ಸಿಡಿ ಚೆಕ್ ಹಾಗೂ ಒಕ್ಕೂಟದ ವಿವಿಧ ಯೋಜನೆಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪಟ್ಟಣದಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಉಪ ಕಚೇರಿಯಲ್ಲಿ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದರು.

ಜಿಲ್ಲೆಯ ಬಹುತೇಕ ಯುವಜನತೆ ಉದ್ಯೋಗಕ್ಕಾಗಿ ಮಹಾನಗರಗಳತ್ತ ಮುಖ ಮಾಡುತ್ತಿದ್ದು, ಇದರ ಬದಲು ಹೈನುಗಾರಿಕೆ ಮಾಡುವುದು ಸೂಕ್ತ. ಹಾಲು ಉತ್ಪಾದಕರಿಗೆ ಹೆಚ್ಚು ಉತ್ತೇಜನ ನೀಡಿದರೆ ಒಳಿತು. ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ತಾಲೂಕು ಮೊದಲ ಸ್ಥಾನದಲ್ಲಿದೆ ಎಂದರು.

ಮನ್ಮುಲ್ ನಿರ್ದೇಶಕ ಕೆ.ಡಾಲು ರವಿ ಮಾತನಾಡಿ, ಖನಿಜ ಮಿಶ್ರಣ ಮತ್ತು ಸಮತೋಲನ ಆಹಾರವನ್ನು ಜಾನುವಾರಿಗೆ ನೀಡಬೇಕು. ಬೇಸಿಗೆ ಆರಂಭವಾಗಿದ್ದು, ತಂಪಾದ ವಾತಾವರಣದಲ್ಲಿ ಪೋಷಣೆ ಮಾಡುವುದರ ಜತೆಗೆ ಶುದ್ಧ ನೀರು ಕುಡಿಸಬೇಕು. ಹೆಚ್ಚಾಗಿ ಹಸಿ ಮೇವನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾರ್ಗ ವಿಸ್ತರಣಾಧಿಕಾರಿಗಳಾದ ಗುರುರಾಜ್ ಸುರಗೀಹಳ್ಳಿ, ಬಿ.ಸಿ.ಮಧುಕುಮಾರ್, ರಘುವೇಂದ್ರ, ಬಸವರಾಜು , ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಉಪಸ್ಥಿತರಿದ್ದರು.