ಕೊಲ್ಹಾರ ತಾಲೂಕಿನ ರೋಣಿಹಾಳದಲ್ಲಿ ಗಾಣಿಗ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಸಮಾರಂಭವನ್ನು ಶ್ರೀಗಳು, ಗಣ್ಯರು ಉದ್ಘಾಟಿಸಿದರು. ಡಾ.ಜಯಬಸವ ಕುಮಾರ ಜಗದ್ಗುರು, ಕಲ್ಲಿನಾಥ ಸ್ವಾಮೀಜಿ, ಸಿದ್ಧಲಿಂಗ ಚೌದರಿ ಇತರರಿದ್ದರು. 
ಜಿಲ್ಲೆ

ಯುವಕರು ಸಮಾಜ ಸಂಘಟನೆಗೆ ಮುಂದಾಗಲಿ - ಡಾ.ಜಯಬಸವ ಕುಮಾರ ಜಗದ್ಗುರು ಹೇಳಿಕೆ

ಕೊಲ್ಹಾರ: ಹಿಂದುಳಿದ ಗಾಣಿಗ ಸಮಾಜ ಬಾಂಧವರನ್ನು ಸಂಘಟಿಸಿ ಸಶಕ್ತಗೊಳಿಸುವ ಕೆಲಸವನ್ನು ಯುವಕರು ಮಾಡಬೇಕು ಎಂದು ಗಾಣಿಗ ಗುರುಪೀಠದ ಡಾ.ಜಯಬಸವ ಕುಮಾರ ಜಗದ್ಗುರು ಹೇಳಿದರು.

ತಾಲೂಕಿನ ರೋಣಿಹಾಳದಲ್ಲಿ ಕೊಲ್ಹಾರ ತಾಲೂಕು ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ರೋಣಿಹಾಳದ ಗಾಣಿಗ ಸಮಾಜದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನೀಟ್, ಜೆಇಇ ಅಥವಾ ಸಿಇಟಿಯಂಥ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದುತ್ತಿರುವ ಸಮಾಜದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಅವರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು ಎಂದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಣಿಗ ಸಮಾಜವು ದೇಶಕ್ಕೆ ಅತ್ಯುತ್ತಮ ನಾಯಕರನ್ನು ಕೊಡುಗೆಯಾಗಿ ನೀಡಿದೆ. ಸಮಾಜದೊಂದಿಗೆ ಇತರೆ ಧರ್ಮಗಳ ಮಕ್ಕಳಿಗೂ ದೇಶ, ಧರ್ಮ, ಸಂಸ್ಕೃತಿ, ಸಂಸ್ಕಾರ ನೀಡುವ ಕೆಲಸ ಮಾಡಬೇಕು ಎಂದರು.

ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಮಾತನಾಡಿ, ಇನ್ನೆರಡು ತಿಂಗಳಲ್ಲಿ ಬಾಗೇವಾಡಿ ಪಟ್ಟಣದಲ್ಲಿ ಮತಕ್ಷೇತ್ರ ಮೂರು ತಾಲೂಕುಗಳನ್ನು ಒಳಗೊಂಡು ಬೃಹತ್ ಸಮಾವೇಶ ನಡೆಸುವ ಗುರಿ ಹೊಂದಲಾಗಿದೆ ಎಂದರು.

ಅಖಿಲ ಭಾರತ ಗಾಣಿಗ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು. ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ಧಲಿಂಗ ಚೌದರಿ ಆಶಯ ನುಡಿಗಳನ್ನಾಡಿದರು. ರಾಜಶೇಖರಯ್ಯ ಹಿರೇಮಠ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಶರಣಬಸಪ್ಪ ಅರಕೇರಿ, ವಿಶ್ವನಾಥ ಗಾಣಿಗ, ದುಂಡಪ್ಪ ಬನಾಗೊಂಡ, ಶರಣು ನ್ಯಾಮಗೌಡ್ರ, ಸಿದ್ದಪ್ಪ ಬಾಲಗೊಂಡ, ಪಿಎಸೈ ಪರಶುರಾಮ ಮನಗೂಳಿ, ಸಂಘದ ತಾಲೂಕು ಅಧ್ಯಕ್ಷ ಪುಂಡಲೀಕ ಬಸರಕೋಡ ಇದ್ದರು.