ದಾಂಡೇಲಿ: ದೇಶದ ಪ್ರಗತಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಪಕ್ಷ ಕಾಂಗ್ರೆಸ್. ಪಕ್ಷದ ಸಂಘಟನೆಯಲ್ಲಿ ಯುವ ಜನತೆಯ ಪಾತ್ರ ಬಹುಮುಖ್ಯವಾಗಿದೆ. ರಾಜ್ಯದ ಬಹುತೇಕ ಸಚಿವರು ಈ ಹಿಂದೆ ಯುವ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡವರು. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಸಾಧನೆಗಳು ಜನರಿಗೆ ಇಷ್ಟವಾಗಿವೆ. ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಪಕ್ಷವನ್ನು ಬಲಿಷ್ಟಗೊಳಿಸುವ ಮಹತ್ವದ ಜವಾಬ್ದಾರಿ ಯುವ ಕಾಂಗ್ರೆಸ್ ಮೇಲಿದೆ ಎಂದರು.
ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿ, ತಾನು ಪಕ್ಷದ ಕಾರ್ಯಕರ್ತನಾಗಿ ಗುರುತಿಸಿಕೊಂಡು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಪಕ್ಷ ಸಂಘಟನೆಗಾಗಿ ಪ್ರಾಮಾಣಿಕವಾಗಿ ತಳಮಟ್ಟದಿಂದ ದುಡಿದವನು ಪಕ್ಷದಲ್ಲಿ ನಾಯಕನಾಗಲು ಸಾಧ್ಯ ಎಂದರು.
ನಗರ ಸಭೆ ಅಧ್ಯಕ್ಷ ಆಶ್ಪಾಕ್ ಶೇಖ ಮಾತನಾಡಿ, ಪರಸ್ಪರ ಸಮಾನತೆ, ಸೌಹಾರ್ದತೆ ಇದೆ. ಸರ್ವ ಜನರ ಹಿತವನ್ನು ಬಯಸುವ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೇಶ ಗೌಡ ಮತ್ತು ಆಶೀಕ್, ರಾಜ್ಯ ಕಾರ್ಯದರ್ಶಿ ಜಿಲಾನಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹರೀಶ್ ನಾಯ್ಕ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಮಾತನಾಡಿದರು.
ನಗರ ಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಅನಿಲ್ ನಾಯ್ಕರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಮುನ್ನ ವಹಾಬ್, ಕ್ಷೇತ್ರ ಅಧ್ಯಕ್ಷ ಅಬ್ದುಲ್ ಕರೀಂ ಖತೀಬ್, ದಾಂಡೇಲಿ ಘಟಕದ ಅಧ್ಯಕ್ಷ ಗಗನ್ ಗೋಪಾಲ್ ಸಿಂಗ್ ರಜಪೂತ್, ಹಳಿಯಾಳ ಘಟಕದ ಅಧ್ಯಕ್ಷ ವೆಂಕಟೇಶ ಸೋಳಂಕಿ, ಜೊಯಿಡಾ ಘಟಕದ ಅಧ್ಯಕ್ಷ ಅಕ್ಷಯ ರಾವಳ್ ಹಾಗೂ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮೋಘ ಶಿರ್ಸಿಕರ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ ನಿರೂಪಿಸಿದರು. ಕಾರ್ಯಕಾರಿಣಿ ಸಭೆಗೂ ಮುನ್ನ ನಗರದ ಪಟೇಲ್ ವೃತ್ತದಿಂದ ಅಂಬೇಡ್ಕರ್ ಭವನದವರೆಗೆ 200 ಮೀಟರ್ ತಿರಂಗ ಯಾತ್ರೆ ನಡೆಯಿತು.