ವಿಜಯವಾಣಿ ಸುದ್ದಿಜಾಲ ಧಾರವಾಡ
ಯಾವುದೇ ಉನ್ನತ ಕಾರ್ಯ ಆಗಬೇಕಾದರೆ ಮನ ಪೂರ್ವಕ, ಭಕ್ತಿ ಪೂರ್ವಕವಾಗಿ ಮುಂದೆ ಬಂದಾಗ ಯಶಸ್ವಿಯಾಗಲು ಸಾಧ್ಯ ಎಂದು ಮುರಗೋಡ ದುರದುಂಡೇಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಶ್ರೀ ಬಸವೇಶ್ವರ ಪೀಠವು ಶ್ರೀ ಅಲ್ಲಮ ಪ್ರಭು ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶತಮಾನದ ಶಿವಯೋಗಿ ಮುರಗೋಡದ ಶ್ರೀ ಮಹಾಂತಪ್ಪ ಶಿವಯೋಗಿಗಳ ಮೂರ್ತಿ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರ ವಚನ, ಗ್ರಂಥಗಳನ್ನು ಇಂದಿನ ಪೀಳಿಗೆ ಅಧ್ಯಯನ ಮಾಡಬೇಕು. ಶರಣರ ಇತಿಹಾಸ ತಿಳಿಸುವ ಶರಣ ಗ್ರಾಮವನ್ನು ನಿರ್ಮಿಸಬೇಕಾದ ಅವಶ್ಯಕತೆ ಇದೆ. ಹೀಗಾಗಿ ಬಸವಾದಿ ಭಕ್ತರು ತನು, ಮನ, ಧನದ ಮೂಲಕ ಶರಣ ಗ್ರಾಮ ನಿಮಿರ್ಸಲು ಮುಂದೆ ಬರಬೇಕು. ಕವಿವಿ ಬಸವೇಶ್ವರ ಪೀಠವು ಬಸವೇಶ್ವರ ಅವರ ವಿಚಾರ, ವಚನ, ತತ್ವಗಳನ್ನು ಪ್ರಾಚಾರ ಮಾಡುವಲ್ಲಿ ತಮ್ಮದೇ ಪಾತ್ರ ವಹಿಸಿದೆ ಎಂದರು.
ಜಡಿ ಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದಿಂದ ಬಂದ ಸಂಪತ್ತನ್ನು ಸಮಾಜಕ್ಕೆ ನೀಡಬೇಕು ಎಂಬುದು ಮಹಾಂತಪ್ಪನವರ ಆಶಯವಾಗಿತ್ತು. ಸಮಾನತೆ, ದಾಸೋಹದ ಪರಿಕಲ್ಪನೆ ನೀಡಿದವರು ಬಸವಣ್ಣನವರು. ಇಂದು ಇಸ್ಲಾಂ ಧರ್ಮದವರು ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿ ಲಿಂಗಾಯಿತರಿಗೆ ಉಪದೇಶ ಮಾಡುತ್ತಿದ್ದಾರೆ. ಆದರೆ ಇಂದು ಲಿಂಗಾಯಿತರು ಬಸವಣ್ಣನವರ ವಚನ, ತತ್ವಗಳನ್ನು ಅಧ್ಯಯನ ಮಾಡದೆ ಇರುವುದು ಬೇಸರದ ಸಂಗತಿ ಎಂದರು.
ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಡಾ.ಎಂ.ಎಂ. ಕಲಬುಗಿರ್ ಪ್ರತಿಷ್ಠಾನದ ಅಧ್ಯ ಡಾ.ವೀರಣ್ಣ ರಾಜೂರ ಮಾತನಾಡಿದರು.
ಬಸವಣ್ಣ-ಸಾಂಸ್ಕೃತಿಕ ನಾಯಕ ಮತ್ತು ಶೂನ್ಯ ಸಂಪಾದನೆ ಎಂಬ ಗ್ರಂಥಗಳನ್ನು ಬಿಡುಗಡೆಮಾಡಲಾಯಿತು. ಸಿಂಡಿಕೇಟ್ ಸದಸ್ಯ ರಾರ್ಬಟ್ ದದ್ದಾಪುರಿ, ಬಸವೇಶ್ವರ ಪೀಠದ ಸಂಯೋಜಕ ಪ್ರೊ. ಸಿ.ಎಂ. ಕುಂದಗೋಳ, ಡಾ. ಈರಣ್ಣ ಇಂಜನಗೇರಿ, ಶಂಕರ ಕುಂಬಿ, ಇತರರು ಇದ್ದರು.