ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದ ಎ.ಸಿ.ಚಂದ್ರೇಗೌಡ ಸ್ಮಾರಕ ಪ್ರೌಢ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಲಾಯಿತು. ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಇದ್ದರು.  
ಜಿಲ್ಲೆ

ಯುವ ಶಕ್ತಿ ಸಮರ್ಥವಾಗಿ ಬಳಕೆಯಾಗಲಿ

ಜಿ.ಹೆಚ್. ಧನ್ಯಕುಮಾರ್

ಕಡೂರು: ಯುವಕರು ತಮ್ಮ ಶಕ್ತಿಯನ್ನು ಸಮರ್ಥವಾಗಿ ಬಳಸಿದರೆ ಎಲ್ಲ ರಂಗಗಳಲ್ಲಿ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಶ್ರೀ ಪ್ರಭುದೇವ ವಿದ್ಯಾ ಸಂಸ್ಥೆ ಅಧ್ಯಕ್ಷ ಎ.ಸಿ.ಪ್ರಭುರಾಜಶೇಖರ್ ಹೇಳಿದರು.
ಕೆ.ಬಿದರೆ ಗ್ರಾಮದಲ್ಲಿ ಎ.ಸಿ.ಚಂದ್ರೇಗೌಡ ಸ್ಮಾರಕ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿ, ಕೆಲವು ದೇಶಗಳಲ್ಲಿ ಯುವಕರ ಕೊರತೆಯಿದೆ. ಆದರೆ ಭಾರತದಲ್ಲಿ ಯುವಕರ ಸಂಖ್ಯೆ ಅಪಾರವಾಗಿದೆ. ಈ ಶಾಲೆಯಲ್ಲಿ ಓದಿ ಉನ್ನತ ಸ್ಥಾನದಲ್ಲಿರುವ ಯುವಕರು ಸೇರಿಕೊಂಡು ಹಿರಿಯ ವಿದ್ಯಾರ್ಥಿ ಸಂಘ ರಚಿಸಿಕೊಂಡು ಶಾಲೆ ಅಭಿವೃದ್ಧಿಗೆ ಮುಂದಾಗಿರುವುದು ಸಂತಸದ ವಿಚಾರ. ಸಂಘದ ಕಾರ್ಯ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಕೆ.ಬಿದರೆ ದೊಡ್ಡ ಮಠದ ಲಿಂಗೈಕ್ಯ ಘನಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಒತ್ತಾಸೆ ಮೇರೆಗೆ 50 ವರ್ಷಗಳ ಹಿಂದೆ ಪ್ರೌಢಶಾಲೆ ಆರಂಭಿಸಲಾಯಿತು. ಇಷ್ಟು ವರ್ಷ ಶಾಲೆ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದು ವಿಪರ್ಯಾಸ. ಇನ್ನು ಮುಂದೆ ಹಿರಿಯ ವಿದ್ಯಾರ್ಥಿಗಳು ಶಾಲೆ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.