ಹುನಗುಂದ: ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಜತೆಗೆ ನಾಡು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕೆಂದು ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಹೇಳಿದರು.
ಪಟ್ಟಣದ ಡಾ. ಜಗಜೀವನರಾಮ್ ನಗರದಲ್ಲಿ ಮಾತಂಗ ಸಾಹಿತ್ಯ ಪರಿಷತ್ ವಾರ್ಷಿಕೋತ್ಸವ, ದಸರಾ ನಿಮಿತ್ತ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಮತ್ತು ಸಂಘಟನೆಯಲ್ಲಿ ಮಹತ್ವದ ಶಕ್ತಿ ಇದ್ದು, ಸಂಪ್ರದಾಯದ ಮಾತಂಗ ಸಾಹಿತ್ಯದ ಮಹತ್ವ, ಅರಿವು ಮತ್ತು ಜೀವಂತಿಕೆಗೆ ಶ್ರಮಿಸಬೇಕಾಗಿದೆ. ಮಹತ್ವದ ಆಚರಣೆಗಳು ಕೇವಲ ಗ್ರಾಮೀಣ ಭಾಗದಲ್ಲಿ ಮಾತ್ರ ಜೀವಂತವಾಗಿವೆ ಎಂದರು.
ಮಹಾಂತಯ್ಯ ಗಚ್ಚಿನಮಠ ಸಾನ್ನಿಧ್ಯ ವಹಿಸಿ ಮಾತನಾಡಿ, ಮೊಬೈಲ್‌ದಿಂದ ಜಗತ್ತು ಓಡುತ್ತಿದೆ ನಿಜ. ಆದರೆ, ಯುವಕರು ಅದನ್ನು ಸದ್ಬಳಕೆ ಮಾಡಿಕೊಂಡು ಜನಾಂಗದ ಸಾಹಿತ್ಯ ಹಾಗೂ ಆಚರಣೆ ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.
ಮಾತಂಗ ಸಾಹಿತ್ಯ ಅಧ್ಯಕ್ಷ ರಾಘು ಬಿಸನಾಳ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಸದಸ್ಯೆ ಕಮಲವ್ವ ಸಂದಿಮನಿ, ಸಮೀರ ದೇಶಪಾಂಡೆ, ಸುರೇಶ ಬಿಸನಾಳ, ಮರುಳಸಿದ್ದಪ್ಪ ಮಾದರ, ರವಿ ಮಾದರ, ಮಾರುತಿ ಭಾವಿಕಟ್ಟಿ, ಮಲ್ಲಪ್ಪ ಕಟ್ಟಿಮನಿ, ಹುಲಗಪ್ಪ ಮಾದರ, ಬಂಗಾರಪ್ಪ ಮಾದರ ಇತರರಿದ್ದರು.
ಗಣ್ಯರನ್ನು ಸನ್ಮಾನಿಸಲಾಯಿತು. ಲಕ್ಷ್ಮಣ ಇದ್ದಲಗಿ ಪ್ರಾರ್ಥಿಸಿದರು. ಪರಸಪ್ಪ ಬಾವಿಕಟ್ಟಿ ಸ್ವಾಗತಿಸಿದರು. ಅಶೋಕ ಬೂದಿಹಾಳ ನಿರೂಪಿಸಿ, ವಂದಿಸಿದರು. ನಂತರ ರಸಮಂಜರಿ ಕಾರ್ಯಕ್ರಮ ನಡೆಯಿತು.