ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ನಾಡಿನ ಏಕೀಕರಣದ ರೂವಾರಿಗಳನ್ನು ಸ್ಮರಿಸಿಕೊಳ್ಳುವ ಮೂಲಕ ನಮ್ಮಲ್ಲಿ ಕನ್ನಡದ ಮನೋಭಾವನೆ ಗಟ್ಟಿಗೊಳ್ಳಬೇಕಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಂಗಮನಾಥ ಲೋಕಾಪುರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಅಳ್ನಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನಾಟಕ ಜಾನಪದ ಸಾಹಿತ್ಯ ಪರಿಷತ್, ಸರ್ಕಾರಿ ಪ್ರೌಢ ಶಾಲೆ ಸಹಯೋಗದಲ್ಲಿ ಅಳ್ನಾವರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣದ ಹೋರಾಟಗಾರ ಅದರಗುಂಚಿ ಶಂಕರಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೋರಾಟವನ್ನೇ ಜೀವನವನ್ನಾಗಿಸಿಕೊಂಡು ಕರ್ನಾಟಕ ಏಕೀಕರಣಕ್ಕೆ ತಮ್ಮನ್ನು ಅಪಿರ್ಸಿಕೊಂಡಿದ್ದ ಅದರಗುಂಚಿ ಶಂಕರಗೌಡರ ಇತಿಹಾಸ ಅರಿಯುವುದರ ಜತೆಗೆ ಅವರ ಭಾವಚಿತ್ರ ವಿಧಾನಸೌಧದಲ್ಲಿ ಅನಾವರಣಗೊಳ್ಳಲು ಮತ್ತು ಪುತ್ಥಳಿ ಸ್ಥಾಪನೆಯಂತಹ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು. ಇದಕ್ಕೆ ಕನ್ನಡ ಅಭಿಮಾನಿಗಳು ಹೋರಾಟವನ್ನೇ ಮಾಡುವ ಪ್ರಸಂಗ ನಿರ್ಮಾಣವಾದರೂ ಅಚ್ಚರಿ ಇಲ್ಲ ಎಂದರು.
ಶಂಕರಗೌಡರ ಪ್ರತಿಷ್ಠಾನದ ಅಧ್ಯಕ್ಷ ವಿರೂಪಾಕ್ಷಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ವಿ.ಜಿ.ಪಾಟೀಲ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಗುರುರಾಜ ಸಬನೀಸ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಮೂ ಮೂಲಗಿ ಅವರಿಗೆ ಸನ್ಮಾನಿಸಲಾಯಿತು.
ಶಾಲೆ ಮುಖ್ಯಾಧ್ಯಾಪಕ ಸಂಜಯ ಮಾಳಿ, ಸುವರ್ಣಾ ಕಡಕೋಳ, ಜಯಶ್ರೀ ಉಡುಪಿ, ಮಂಜುಳಾ ಜ್ಯೋತಿ, ಮಹಾಂತೇಶ ಹುಬ್ಬಳ್ಳಿ, ಸುರೇಂದ್ರ ಕಡಕೋಳ, ಇತರರು ಇದ್ದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ ಪಾಟೀಲ ನಿರೂಪಿಸಿದರು.ಪ್ರವಿಣ ಪವಾರ ವಂದಿಸಿದರು.