ಜಿಲ್ಲೆ

ಹಿರಿಯರ ಸತ್ಸಂಪ್ರದಾಯ ಯುವಕರು ಪಾಲಿಸಲಿ: ಡಾ.ಎಸ್. ಶಿವರಾಜಪ್ಪ

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರು ಗಣ್ಯರನ್ನು ಸನ್ಮಾನಿಸಲಾಯಿತು.
ಮೈಸೂರು ವಿಶ್ವ ವಿದ್ಯಾಲಯದ ಪ್ರಸಾರಾಂಗದ ನಿವೃತ್ತ ನಿರ್ದೇಶಕ ಕೆ.ಟಿ. ವೀರಪ್ಪ, ಹಿರಿಯ ಸಮಾಜ ಸೇವಕರಾದ ವೈದೇಹಿ ಹಾಗೂ ಹಿರಿಯ ರಂಗಕಲಾವಿದ ರಾಜಶೇಖರ ಕದಂಬ ಅವರನ್ನು ಗೌರವಿಸಲಾಯಿತು.
ಸನ್ಮಾನ ನೆರವೇರಿಸಿದ ಶ್ರೀನಟರಾಜ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್. ಶಿವರಾಜಪ್ಪ ಮಾತನಾಡಿ, ನಮ್ಮ ಹಿರಿಯರು ಸತ್ಸಂಪ್ರದಾಯದ ಮಾರ್ಗ ಹಾಕಿಕೊಟ್ಟಿದ್ದು, ಅದನ್ನು ಇಂದಿನ ಯುವ ಜನಾಂಗ ಪಾಲಿಸಬೇಕು ಎಂದರು.
ವಿಶ್ವದೆಲ್ಲಡೆ ಭಾರತಕ್ಕೆ ಗೌರವ ದೊರಕಿಸುವ ನಿಟ್ಟಿನಲ್ಲಿ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ಹಿರಿಯರು ನೀಡಿದ ಕೊಡುಗೆ ಗಣನೀಯವಾಗಿದೆ. ಹೀಗಾಗಿ ಭಾರತ ಇತರರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಆದರೆ, ಇತ್ತೀಚಿನ ದಿನಗಳಲ್ಲಿ ಆಧುನೀಕತೆಯ ಭರಾಟೆ, ಕೆಲಸದ ಒತ್ತಡದಿಂದಾಗಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ಭಾರತದಲ್ಲಿಯೇ ವೃದ್ಧಾಶ್ರಮಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕಿ ಡಾ. ಪುಷ್ಪಾ ಅಯ್ಯಂಗಾರ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಪತ್ರಕರ್ತೆ ಮ.ನ.ಲತಾಮೊಹನ್ ಇತರರು ಇದ್ದರು.