ಸಿರವಾರದಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಸಂಚಾಲಕ ಎನ್.ಉದಯಕುಮಾರ ಸಾಹುಕಾರ್ ಶನಿವಾರ ಉದ್ಘಾಟಿಸಿದರು. ಪಪಂ ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಜ್ಯೋತಿ ಅಕ್ಕ, ಲಯನ್ಸ್ ಕ್ಲಬ್‌ನ ಜಿಲ್ಲಾ ಸಮಿತಿಯ ಪರಿಕಾಲ್ ರಾಮು ಇತರರಿದ್ದರು. 
ಜಿಲ್ಲೆ

ಯುವಕರು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಲಿ

ಗಾಯತ್ರಿ ಮಾಲಿಪಾಟೀಲ್

ಸಿರವಾರ: ಮಳೆಗಾಲ ಆರಂಭವಾಗಿದ್ದು, ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಣೆ ಮಾಡುವ ಮೂಲಕ ಹಸಿರು ಸಿರವಾರ ಮಾಡುವ ಸಂಕಲ್ಪ ಮಾಡಬೇಕು ಎಂದು ಲಯನ್ಸ್ ಕ್ಲಬ್ ಸಂಚಾಲಕ ಎನ್.ಉದಯಕುಮಾರ ಸಾಹುಕಾರ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಪಪಂ, ಮಾನ್ವಿ ಸಾಮಾಜಿಕ ಅರಣ್ಯ ವಲಯ, ಲಯನ್ಸ್ ಕ್ಲಬ್ ಆಫ್ ಸಿರವಾರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ನಾಶದಿಂದ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರ ಕೊಡುಗೆಯಾಗಿ ನೀಡಬೇಕಿದೆ. ಯುವಕರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸದೆ ಜವಾಬ್ದಾರಿ ಮರೆಯುತ್ತಿದ್ದಾರೆ. ಕೇವಲ ರಾಜಕೀಯ ಸಮಾರಂಭಗಳಿಗೆ ಹಾಜರಿರುತ್ತಾರೆ. ಈಗಲಾದರೂ ಎಚ್ಚೆತ್ತು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕಾಗಿದೆ ಎಂದರು.

ದೇವದುರ್ಗ ಕ್ರಾಸ್‌ನಿಂದ ಕೇಂದ್ರ ಬಸ್‌ನಿಲ್ದಾಣದ ವರೆಗೂ ಡಿವೈಡರ್‌ಗಳ ಮಧ್ಯೆ ಸಸಿಗಳನ್ನು ನೆಡಲಾಯಿತು. ಮುಂಗಾರು ಸಿರಿ ಸಂಪದ ಪ್ರಶಸ್ತಿ ಪುರಸ್ಕೃತ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಜ್ಞಾನಮಿತ್ರ ಅವರನ್ನು ಸನ್ಮಾನಿಸಲಾಯಿತು.

ಪಪಂ ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಜ್ಯೋತಿ ಅಕ್ಕ, ಲಯನ್ಸ್ ಕ್ಲಬ್ ಜಿಲ್ಲಾ ಸಮಿತಿಯ ಪರಿಕಾಲ್ ರಾಮು, ಪ್ರಮುಖರಾದ ಮಲ್ಲಿಕಾರ್ಜುನ ಬಾಳೆ, ಪಿಎಸ್‌ಐ ಅಮರೇಗೌಡ, ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ವೀರೇಶ ಗಣೇಕಲ್, ನರಸಿಂಹರಾವ್ ಕುಲ್ಕರ್ಣಿ ಇತರರಿದ್ದರು.