ದೇವದುರ್ಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕೆ ಹೆಚ್ಚಿನ ಆದ್ಯತೆಯಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.
ತಾಲೂಕಿನ ಕೋತಿಗುಡ್ಡ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ‘ನನ್ನ ಮಣ್ಣು ನನ್ನ ದೇಶ ಯೋಜನೆ’ಯಡಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಯುವಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮೊಬೈಲ್, ಟಿವಿ,ಸಾಮಾಜಿಕ ಜಾಲತಾಣಗಳ ಹಿಂದೆ ಬೀಳದೆ ಓದಿನ ಕಡೆ ಹೆಚ್ಚಿನ ಆದ್ಯತೆ ನೀಡಬೇಕು. ಜೀವನದಲ್ಲಿ ನಿರ್ದಿಷ್ಟ ಗುರಿಯಿಟ್ಟುಕೊಂಡು ಅಧ್ಯಯನ ಮಾಡಬೇಕು ಎಂದರು.
ಪ್ರಾಧ್ಯಾಪಕ ಸುಭಾಸ್ ಚಂದ್ರ ಪಾಟೀಲ್ ಮಾತನಾಡಿ, ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ಆತ್ಮಸ್ಥೈರ್ಯ, ಶಿಸ್ತು, ದೇಶಭಕ್ತಿ ಭಾವನೆ ಬೆಳೆಯಲಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಹನುಮಂತ ಜಗ್ಲಿ, ಪ್ರಾಚಾರ್ಯೆ ಡಾ.ಫಾತಿಮಾ ಹಸನಾ ಬೇಗಂ, ಡಾ.ಮಲ್ಲಯ್ಯ ಅತ್ತನೂರು, ಡಾ.ಬಿ.ಜಿ.ಅನಂತ, ಚಂದ್ರಶೇಖರ ಅಕ್ಕರಕಿ, ಕಾಶಪ್ಪ ಇತರರಿದ್ದರು.