ವಿಜಯಪುರ: ರೈತ ಈ ದೇಶದ ಬೆನ್ನೆಲುಬು, ಕೃಷಿ ಪ್ರಧಾನವಾದ ನಮ್ಮ ದೇಶದ ರೈತರ ಮಕ್ಕಳು ನೌಕರಿಗಾಗಿ ಕೃಷಿಯಿಂದ ದೂರ ಸರಿಯುತ್ತಿರುವುದು ಕಳವಳಕಾರಿ ಅಂಶವಾಗಿದೆ ಎಂದು ಹೈದ್ರಾಬಾದ್‌ನ ಅಖಿಲ ಭಾರತ ಜೋಳ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ. ಮದುಸೂದನ ಆರ್. ಹೇಳಿದರು.
ನಿಡಗುಂದಿ ತಾಲೂಕಿನ ಉಣ್ಣಿಭಾವಿ ಗ್ರಾಮದಲ್ಲಿ ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಅಖಿಲ ಭಾರತ ಜೋಳ ಅಭಿವೃದ್ಧಿ ಯೋಜನೆ, ನಿಡಗುಂದಿಯ ಶ್ರೀ ಹಾದಿಬಸವಣ್ಣಪ್ಪ ಆಯಿಲ್ ಸೀಡ್ಸ್ ಹಾಗೂ ಮಿಲೆಟ್ಸ್ ಪ್ರೋಡ್ಯೂಡರ್ ಕಂಪನಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಸಿರಿಧಾನ್ಯ ತಂತ್ರಜ್ಞಾನಗಳ ಪ್ರಚಾರ ಹಾಗೂ ಅಳವಡಿಕೆ ತರಬೇತಿ ಕಾರ್ಯಕ್ರಮ’ವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಈ ಭಾಗದ ಪ್ರಮುಖ ಬೆಳೆ ಜೋಳವನ್ನು ನಿರ್ಲಕ್ಷಸುತ್ತಿದ್ದು, ಜನರು ಅಪೌಷ್ಠಿಕತೆ, ಮುಂತಾದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೋಳ ತಿಂದವನು ತೋಳದಂತಾಗುತ್ತಾನೆಂಬ ಗಾದೆಯಿದೆ. ಅದಕ್ಕಾಗಿ ಜೋಳ ಹಾಗೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಬೇಕೆಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಇಂದು ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಇವರ ಜನ್ಮ ದಿನವನ್ನು ರಾಷ್ಟ್ರೀಯ ರೈತ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಈ ಸಲದ ಘೋಷ್ಯವಾಕ್ಯ ಸುಸ್ಥಿರ ಕೃಷಿ ಪುನಚೇತನಕ್ಕಾಗಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಎಂಬುದಾಗಿದೆ. ಡಾ. ಚೌದರಿ ಚರಣಸಿಂಗ್ ಅವರು ರೈತರ ಸಮಗ್ರ ಏಳ್ಗೆಗಾಗಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು, ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದಾಗಿ ರೈತರು ಸಾವಲಂಬಿ ಬದಕು ಸಾಗಿಸಲು ಅನುಕೂಲವಾಗಬೇಕು ಎಂಬ ಮಹಾದಾಸೆ ಅವರಲ್ಲಿತ್ತು. ದೇಶಕ್ಕೆ ಅನ್ನ ನೀಡುವ ರೈತರನ್ನು, ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ನೆನೆಯುವ ಸಲುವಾಗಿ ಈ ದಿನವನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಅಚರಿಸಲಾಗುತ್ತಿದೆ ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ. ಎಸ್.ಬಿ. ಜಗ್ಗಿನವರ ಮಾತನಾಡಿ, ರೈತರು ಸಂಘಟಿತರಾಗಬೇಕು, ಕೃಷಿಯನ್ನು ನಂಬಿ ಶ್ರಮವಹಿಸಿ ದುಡಿಯಬೇಕು. ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳಬೇಕು. ಆಗಲೇ ಅವರ ಬದುಕು ಹಸನಾಗುತ್ತದೆ ಎಂದರು.
ಡಾ. ಎಸ್.ಎಸ್. ಕರಭಂಟನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀರಲದಿನ್ನಿ ಗ್ರಾಪಂ ಅಧ್ಯಕ್ಷೆ ರಮಜಾಬಾನು ಎಚ್. ಪಟೇಲ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಿಗಳಾದ ಡಾ. ಚಂದ್ರಕಾಂತ ಸೋರೆಗಾವಿ, ಡಾ. ಅಶ್ವತ್ಥಾಮ ಎ.ಎಚ್, ಬಾಲಕೃಷ್ಣ ಅ. ಗೌಡರ, ಅಶೋಕ ಶ. ಕೊನರಡ್ಡಿ, ಬಸವರಾಜ ಎಸ್. ಕೊನರಡ್ಡಿ, ಸಂಗನಗೌಡ ಕೊನರಡ್ಡಿ, ಭೀಮನಗೌಡ ಬ. ಕೊನರಡ್ಡಿ, ಶೇಖರ ಗೂಗಿಹಾಳ, ವೀರಣ್ಣ ಚ. ಮನಗೊಂಡ, ಮಲ್ಲನಗೌಡ ಬ. ನಾಡಗೌಡ, ಸತೀಶ ನರಸರಡ್ಡಿ, ಅಶೋಕ ಪಿ. ಕೊನರಡ್ಡಿ, ಚನ್ನಪ್ಪ ರಾ ಕಂಬಳಿ, ಶಂಕ್ರೆಪ್ಪ ಹೂಗಾರ, ಸಾಹೇಬಗೌಡ ಕು. ಪಾಟೀಲ, ಮಹಾದೇವಪ್ಪ ಪ. ಕೊನರಡ್ಡಿ, ತಿಮ್ಮನಗೌಡ ಕ. ಪಾಟೀಲ, ಮಂಜುನಾಥ ಸಿ. ಸವನೂರ, ರಾಧಾ ರಾ. ಚಲವಾದಿ, ಶ್ರೀಶೈಲ ಗು. ಕೊನರಡ್ಡಿ, ವನಕೇರಪ್ಪಗೌಡ ಬ. ನರಸರಡ್ಡಿ ಮತ್ತಿತರರಿದ್ದರು.
ಉತ್ತರ ಕರ್ನಾಟಕದ ಸೀತನಿ ಜೋಳ ಕುರಿತು ಹಸ್ತ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಆಯ್ದ ಫಲಾನುಭವಿ ರೈತರಿಗೆ ಯೋಜನೆಯಡಿಯಲ್ಲಿ ಕೀಟನಾಶಕ ಸಿಂಪರಣೆ ಸಾಧನ ಮತ್ತು ತಾಡಪತ್ರಗಳನ್ನು ವಿತರಿಸಲಾಯಿತು.