ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಗ್ರಂಥಾಲಯ ಸಪ್ತಾಹ ಹಾಗೂ ಮಕ್ಕಳ ದಿನವನ್ನು ಆಚರಿಸಲಾಯಿತು.
ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರತಿಯೊಂದು ಗ್ರಾ.ಪಂ. ಕೇಂದ್ರಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿರುವ ಜತೆಯಲ್ಲಿ ಈಗ ವಿದ್ಯಾರ್ಥಿಗಳಿಗೆ ಪೂರಕವಾಗುವ ಮತ್ತು ಯವಕ, ಯುವತಿಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಡಿಜಿಟಲ್ ಮಾಹಿತಿ ಕೇಂದ್ರವನ್ನು ಸ್ಥಾಪಿಸಿದೆ ಎಂದು ತಿಳಿಸಿದರು.
ದುಂಡಳ್ಳಿ ಗ್ರಾ.ಪಂ. ಸದಸ್ಯ ಡಿ.ಬಿ.ಬೋಜಪ್ಪ ಮಾತನಾಡಿ, ಪುಸ್ತಕಗಳನ್ನು ಓದುವುದರಿಂದ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ತ್ಯಾಗರಾಜ ಕಾಲನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಮತ್ತು ದಾನಿ ಕೆ.ಟಿ.ಹರೀಶ್ ಉದ್ಘಾಟಿಸಿದರು. ನಂತರ ಮಕ್ಕಳ ದಿನಾಚರಣೆಯನ್ನು ಆಚರಿಸಲಾತು. ದುಡಳ್ಳಿ ಗ್ರಾ.ಪಂ.ಸದಸ್ಯ ದೇವರಾಜ್, ಪಿಡಿಒ ಆಯಿಷಾ ಬಾನು ಇತರರು ಇದ್ದರು.