ಜಿಲ್ಲೆ

ಯುವ ಪೀಳಿಗೆ ಆಧ್ಯಾತ್ಮಿಕ ಚಿಂತನೆ ಮೈಗೂಡಿಸಿಕೊಳ್ಳಲಿ

ವೀರೇಶ ಸೌದ್ರಿ

ಸವಣೂರ: ಯುವ ಪೀಳಿಗೆ ಆಧ್ಯಾತ್ಮಿಕ ಚಿಂತನೆ ಮೈಗೂಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಅಕ್ಕನ ಬಳಗದ 50ನೇ ವರ್ಷದ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ಭಕ್ತಿಯ ಕ್ರಾಂತಿ ಶರಣರಿಂದಾಗಿದೆ. ಕಲ್ಯಾಣ ಕ್ರಾಂತಿಗಾಗಿ ಹಲವಾರು ಶರಣರು ಕೊಡುಗೆ ನೀಡಿದ್ದಾರೆ. ಶುದ್ಧ ಅಂತಃಕರಣ, ಭಕ್ತಿಯ ಭಾವ ಅಕ್ಕ ಮಹಾದೇವಿ ಅವರ ವಚನದಲ್ಲಿವೆ. ಯಾವುದನ್ನು ಬಯಸದೆ ಶುದ್ಧ ಅಂತಃಕರಣದಲ್ಲಿ ಲೀನವಾಗಿರುವ ಶರಣೆ ಅಕ್ಕಮಹಾದೇವಿ. ನಮ್ಮ ಸಂಸ್ಕೃತಿ, ಸಂಸ್ಕಾರದ ಮೌಲ್ಯಗಳು ನಮ್ಮ ಪರಿವಾರದಲ್ಲಿ ಉಳಿದುಕೊಂಡಿವೆ ಎಂದರೆ ಅದು ತಾಯಂದಿರಿಂದ ಎಂದರು.

ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ, ಅಡವಿಸ್ವಾಮಿ ಮಠದ ಶ್ರೀ ಕುಮಾರ ಸ್ವಾಮೀಜಿ, ಸದಾಶಿವಪೇಟೆ ವಿರಕ್ತಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚನ್ನಮ್ಮ ಬೊಮ್ಮಾಯಿ ಅವರು ‘ಅಕ್ಕನ ವಚನಗಳು’ ಕೃತಿ ಲೋಕಾರ್ಪಣೆಗೊಳಿಸಿದರು.

ಅಕ್ಕನ ಬಳಗದ ಅಧ್ಯಕ್ಷೆ ಕವಿತಾ ಬಡಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬೊಮ್ಮಾಯಿ ದಂಪತಿಯನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರ ಪತ್ನಿ ಅಲಕಾ ಸಿಂಧೂರ ಅವರಿಗೆ ತ್ರಿವಿಧ ದಾಸೋಹ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧಾರವಾಡದ ಯುವ ವಾಗ್ಮಿ ಐಶ್ವರ್ಯಾ ಸೋಲಾರಗೊಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಶಿಗ್ಗಾಂವಿಯ ವಚನ ನಿಧಿ ವನಿತಾ ಸಂಘ ಹಾಗೂ ಸವಣೂರಿನ ಅಕ್ಕನ ಬಳಗದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನಘಾ ಮುರಡಿ ತಂಡದವರಿಂದ ಭರತನಾಟ್ಯ ಜರುಗಿತು.