ಜಿಲ್ಲೆ

ಯುವ ಕಲಾವಿದರಿಗೆ ಸೂಕ್ತ ವೇದಿಕೆ ಸಿಗಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲಾವಿದರಿಗೆ ವೇದಿಕೆ ಬಹಳ ಮುಖ್ಯ. ಇಲ್ಲವಾದರೆ ಕಲೆಗಳು ಕಳೆದುಹೋಗುತ್ತವೆ. ಸಂಗೀತ, ಸಾಹಿತ್ಯ ಎಂಬುದು ಮೊದಲು ವ್ಯವಹಾರಿಕವಾಗಿರಲಿಲ್ಲ. ಶಾಸ್ತ್ರೀಯ ಸಂಗೀತವನ್ನು ಸಂಗೀತಾಸಕ್ತರು ಬೆಳೆತನಕ ಕುಳಿತು ಕೇಳುತ್ತಿದ್ದ ದಿನಗಳು ಇಂದು ಇಲ್ಲದಾಗಿವೆ ಎಂದು ಕಲಾವಿದ ಶಾಂತರಾಮ್​ ಹೆಗಡೆ ಅವರು ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಿಜಗುಣ ಮಂಗಿ ಅವರ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಾವಿದರಿಗಾಗಿ ಕಲಾವಿದರಿಂದ ಹುಟ್ಟಿಕೊಂಡ ಸಂಸ್ಥೆಗಳು ಇದ್ದವು. ಬೆಳತನಕ ಶಾಸ್ತ್ರೀಯ ಸಂಗೀತ ಕೇಳಲು ಜನ ಆಸಕ್ತಿಯಿಂದ ಬರುತ್ತಿದ್ದರು. ಈಗ ಕಲಿಯುವ ಕಲಾವಿದರು ಜಾಸ್ತಿ ಇದ್ದು, ಅವರಿಗೆ ವೇದಿಕೆಗಳು ಬೇಕಿವೆ. ಸಂಘ ಈ ದಿಸೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿದೆ ಎಂದರು.
ಹನುಮಂತ ಬುರ್ಲಿ ಮಾತನಾಡಿ, ಕಲಾವಿದನಿಗೆ ತುಡಿತವಿದ್ದಾಗಲೇ ಸಾಧನೆ ಸಾಧ್ಯ. ಸಂಗೀತ ಎಂಬುದು ಎಲ್ಲರಿಗೂ ಒಲಿಯುವುದಲ್ಲ. ಸಾಧನೆಯಿಂದ ಮಾತ್ರ ಸರಸ್ವತಿ ಒಲಿಯುತ್ತಾಳೆ. ತಮ್ಮ ಶಿಷ್ಯ ನಿಜಗುಣ ಮಂಗಿಯವರು ಒಳ್ಳೆ ಯುವ ಸಂಗೀತಗಾರರಾಗಿದ್ದು, ಪರಿಶ್ರಮದಿಂದ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದರು.
ನಿಜಗುಣ ಮಂಗಿ ಗಾಯನ ಪ್ರಸ್ತುತಪಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ನಂದಾ ಗುಳೇದಗುಡ್ಡ, ಗೀತಾ ಕುಲಕರ್ಣಿ, ನೀಲಾ ಸಿಗ್ಲಿ, ಸುಜಾತ ಗುರವ, ಪುಷ್ಪಾ ಹಿರೇಮಠ, ಇತರರು ಇದ್ದರು.
ವಿಷಯಾ ಜೇವೂರ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘಾ ಹುಕ್ಕೇರಿ ನಿರೂಪಿಸಿದರು. ಸುನಿತಾ ವಾಸರದ ವಂದಿಸಿದರು.