ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಜನ ಸ್ಪಂದನೆ ಉತ್ತಮವಾಗಿದೆ. ಕೇಂದ್ರ ಸರ್ಕಾರದ ಕಾರ್ಯಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಿದ್ದಾರೆ. ಮತದಾರರು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲೂಕಿನ ನರೇಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಭಾರತದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆ ತಂದಿದೆ. ಹಣಕಾಸು, ಮೂಲಸೌಕರ್ಯ, ಆರೋಗ್ಯ, ರಕ್ಷಣೆಯಂತಹ ಕ್ಷೇತ್ರಗಳಲ್ಲಿನ ಏಕತಾನತೆ ಹೋಗಲಾಡಿಸಿ, ಹೊಸ ಯೋಜನೆ, ಕ್ರಮಗಳನ್ನು ಜಾರಿಗೊಳಿಸಿ ಭಾರತದ ಭವ್ಯ ಭವಿಷ್ಯಕ್ಕೆ ನಾಂದಿ ಹಾಡಿದೆ ಎಂದರು.
ಪ್ರಸ್ತುತ ಚುನಾವಣೆ ದೇಶದ ಭವಿಷ್ಯ ನಿರ್ಣಯಿಸುವ ಚುನಾವಣೆ. ಹೀಗಾಗಿ ಪಕ್ಷದ ಎಲ್ಲ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಬೇಕಲ್ಲದೆ, ಚುನಾವಣಾ ಕಾರ್ಯವನ್ನು ಜವಾಬ್ದಾರಿಯಿಮದ ನಿರ್ವಹಿಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ 10 ವರ್ಷ ಮಾಡಿದ ಸಾಧನೆಗಳನ್ನು ವಿವರಿಸಿದ ಅವರು, ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ನನ್ನ ಪರ ಪ್ರಚಾರ ಮಾಡಿ ಹೆಚ್ಚು ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪ್ರಪಂಚದ 5ನೇ ಅತಿದೊಡ್ಡ ಆಥಿರ್ಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಇದಕ್ಕೆ ಮೋದಿಯವರ ಆಥಿರ್ಕ ನೀತಿ ಕಾರಣ. ನಾನು ಕ್ಷೇತ್ರದ ಜನರ ನಂಬಿಕೆಗೆ ಸ್ವಲ್ಪವೂ ಕುಂದು ಬರದಂತೆ ನೋಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲೂ ಇದೇ ರೀತಿ ನಡೆದುಕೊಳ್ಳುವುದಾಗಿ ಹೇಳಿದ ಜೋಶಿ, ಚುನಾವಣೆಯಲ್ಲಿ ಅತ್ಯಂತ ಬಹುಮತ ನೀಡಿ ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಲು ಮತ ನೀಡಿ ಎಂದು ಮನವಿ ಮಾಡಿದರು.
ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮುಖಂಡರಾದ ಶಂಕರ ಮುಗದ, ನಿಂಗಪ್ಪ ಸುತಗಟ್ಟಿ, ಜಯತೀರ್ಥ ಕಟ್ಟಿ, ಶಿವು ಹಿರೇಮಠ, ಪ್ರೇಮಾ ಕೋಮಾರದೇಸಾಯಿ, ಇತರರು ಇದ್ದರು.